IF YOU CAN’T MAKE IT, FAKE IT!!- ಗಂಭೀರ‍ ಚರ್ಚೆಗೆ ಸಿಲುಕದ ಮೋಸದ ಸಂಗತಿ

Posted by ಅರುಂಧತಿ | Posted in | Posted on 7:29 AM

ಅದು ಆಗೋದು ಹಾಗೇ. ಎತ್ತರದ ಜಾಗದಲ್ಲಿ ಕುಳಿತವನೊಬ್ಬ ಅದೇನೇ ತಪ್ಪು ಮಾಡಿದರೂ, ಅವನ ಸ್ಥಾನದ ಮಹಿಮೆಯಿಂದ ಅವೆಲ್ಲವೂ ಮುಚ್ಚಿ ಹೋಗ್ತದೆ. ಆತ ಅದೆಷ್ಟು ವಂಚನೆಗಳನ್ನು ಮೆಟ್ಟಿಲಾಗಿಸಿಕೊಂಡು ಆ ಎತ್ತರವನ್ನು ಏರಿರುತ್ತಾನೆಂದರೆ, ಸ್ವತಃ ಅವನಿಗೇ ಅದನ್ನು ನೋಡಲು ಭಯ. ಅದಕ್ಕೇ ಆತ ಆದಷ್ಟೂ ಆ ಹಳೆ ವಂಚನೆಗಳನ್ನು ತನ್ನ ಕೋಟಿನ ತುದಿಗೂ ತಗುಲದ ಹಾಗೆ ಚಾಲಾಕಿ ತನದಿಂದ ವರ್ತಿಸ್ತಾನೆ. ಈ ಮಾತು ಅಮೆರಿಕಕ್ಕೂ ಸಲ್ಲುತ್ತದೆ. ಅದು ತನ್ನ ಚಂದ್ರಯಾನದ ಬಗ್ಗೆ ಈಗ / ಈಗ ಯಾಕೆ, ಹೋಗಿ ಬಂದು ಒಂದು ಸುತ್ತು ಪ್ರಚಾರ ಕೊಟ್ಟುಕೊಂಡ ನಂತರದಿಂದಲೂ ಮಾತೇ ಆಡುವುದಿಲ್ಲ.

ಸುಮಾರು ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಈ ಮಹಾನ್ ಚಂದ್ರಯಾನ ಸಾಧನೆಯ ಕುರಿತು ಅಂತರ್ಜಾಲದ ಅಧಿಕೃತ ಮಾಹಿತಿಯನ್ನಾಧರಿಸಿ ಬರೆದಿದ್ದ ಲೇಖನವನ್ನು ಈಗ ಮತ್ತೆ ಗಮನಕ್ಕೆ ತರುವುದು ಸೂಕ್ತವೆನಿಸುತ್ತಿದೆ. ಇದಕ್ಕೆ ಕಾರಣವೂ ಇದೆ.

ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಡಚ್ ರಾಷ್ಟ್ರೀಯ ವಸ್ತು ಸಂಗ್ರಹಾಲಯ ರಿಜ್ಕ್ಸ್ ಮ್ಯೂಸಿಯಮ್ ಒಂದು ಸಂಗತಿಯನ್ನು ಬಹಿರಂಗಪಡಿಸಿತು. ತನ್ನ ಸಂಗ್ರಹದಲ್ಲಿರುವ, ಚಂದ್ರನಿಂದ ತಂದಿದ್ದೆಂದು ಹೇಳಲಾದ ಕಲ್ಲು ವಾಸ್ತವದಲ್ಲಿ ಚಂದ್ರನಿಂದ ತಂದುದಾಗಿರದೆ, ಕಲ್ಲಾಗಿರುವ (ಜಡಗಟ್ಟಿದ) ಮರದ ತುಂಡು ಎಂದು ಸಾಬೀತಾಗಿರುವ ವಿಷಯವನ್ನು ಅದು ಹೇಳಿತು. ಬಾಹ್ಯಾಕಾಶ ಸಂಶೋಧಕರೊಬ್ಬರು ವಿವಿಧ ಪರೀಕ್ಷೆಗಳ ನಂತರ ಅದನ್ನು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ ಮ್ಯೂಸಿಯಮ್ಮ್ಮಿನ ವಕ್ತಾರ ಕ್ಸಾಂಡ್ರಾ ವಾನ್ ಜೆಲ್ಡರ್, ತಾವು ಕುತೂಹಲಕ್ಕಾಗಿಯಾದರೂ ಈ ಕಲ್ಲನ್ನು ತಮ್ಮ ಸಂಗ್ರಹಾಲಯದಲ್ಲಿ ಇನ್ನು ಮುಂದೆಯೂ ಇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದರು.

ಈ ಕಲ್ಲನ್ನು ೧೯೬೯ರಲ್ಲಿ ನೆದರ್ ಲ್ಯಾಂಡಿಗೆ ಭೇಟಿ ನೀಡಿದ್ದ ಅಮೆರಿಕನ್ ರಾಯಭಾರಿ ಜೆ.ವಿಲಿಯಮ್ ವಿಡೆನ್ ಡಾರ್ಫ್, ಅಂದಿನ ಪ್ರಧಾನಿ ವಿಲ್ಲೆಮ್ ಡ್ರೀಸ್ ಮೆನ್ನರಿಗೆ ಉಡುಗೊರೆಯಾಗಿ ನೀಡಿದ್ದರು. ೧೯೯೮ರಲ್ಲಿ ಡ್ರೀಸ್ ಮೆನ್ನರ ಮರಣದ ನಂತರ ಸಂಗ್ರಹಾಲಯವು ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

ಇದು ಉತ್ತರ ಪಡೆಯಲಾಗದಂತಹ ಪ್ರಶ್ನೆಗಳುಳ್ಳ ಒಂದು ಕಥೆಯಂತಿದೆ. ಈ ಬಗ್ಗೆ ನಾವು ನಗಬಹುದಷ್ಟೆ! ಎನ್ನುತ್ತಾರೆ ಮಿಸ್ ಕ್ಸಾಂಡ್ರಾ. ನಾವೂ ಅಷ್ಟೇ… ಏನಂತೀರಿ!?

~ ಚಕ್ರವರ್ತಿ ಸೂಲಿಬೆಲೆ

ಮೋಸ, ಕೊಲೆ ಏನಾದರೂ ಸರಿ. ಮೇಲೆ ಬರಬೇಕು ಅಷ್ಟೆ!

ಮಾನವನಿಟ್ಟ ಪುಟ್ಟ ಹೆಜ್ಜೆ, ಮನುಕುಲದ್ದೊಂದು ದಿಟ್ಟ ನೆಗೆತ ಚಂದ್ರನ ಮೇಲೆ ಕಾಲಿಟ್ಟೊಡನೆ ನೀಲ್ ಆರ್ಮ್‌ಸ್ಟ್ರಾಂಗ್ ಹೇಳಿದ ಮಾತಿದು. ಇಡಿಯ ಜಗತ್ತು ಅವತ್ತು ಚಂದ್ರನೊಂದಿಗೆ ಏಕಾತ್ಮವಾಗಿಬಿಟ್ಟಿತ್ತು. ಅಮೆರಿಕದ ಸಾಧನೆಗೆ ತಲೆದೂಗಿ ನಿಂತಿತ್ತು. ಈ ಘಟನೆ ನಡೆದ ೩೬ ವರ್ಷಗಳ ನಂತರ ಅದೇ ಅಮೆರಿಕ ಧೂಮಕೇತುವಿಗೆ ಗುದ್ದಿ ಸಾಧನೆಯ ಪುಟದಲ್ಲಿ ಮತ್ತೊಮ್ಮೆ ಹೆಸರು ಬರೆದಿದೆ.

ಆದರೆ ಒಂದ್ನಿಮಿಷ ಆಲೋಚಿಸಿ ನೋಡಿ. ತಮ್ಮ ಪಾಡಿಗೆ ತಾವಿದ್ದ ಆಕಾಶಕಾಯಗಳನ್ನು ಮುಟ್ಟುವ, ತಟ್ಟುವ, ಅದೇ ಹೆಸರಿನಲ್ಲಿ ಆನಂದದಿಂದ ಕುಣಿದಾಡುವ ಹಕ್ಕು ನಮಗೆಲ್ಲಿಯದು? ಇತರ ರಾಷ್ಟ್ರಗಳಿಗಿಂತ ಮುಂದಿದ್ದೇವೆ, ಎತ್ತರದಲ್ಲಿದ್ದೇವೆ ಎನ್ನುವ ತವಕದಿಂದ ಅಮೆರಿಕ ನಾಸಾದ ಮೂಲಕ ಮಾಡಿಸುವ ಕೆಲಸಗಳೆಲ್ಲ ಮನುಕುಲಕ್ಕೊಂದು ದೊಡ್ಡ ಹೊಡೆತವೇ ಅಲ್ಲವೇ? ಇಷ್ಟಕ್ಕೂ ಅಮೆರಿಕ ಮಾಡಿರುವ ಸಾಧನೆಗಳು ಎಷ್ಟರ ಮಟ್ಟಿಗೆ ಸಾರ್ಥಕವಾದುದು, ಸತ್ಯವಾದುದು ಎಂಬುದೇ ಗಂಭೀರವಾದ ಪ್ರಶ್ನೆ.

ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಕೆಲವು ವರ್ಷಗಳ ನಂತರ, ಈ ಪ್ರಶ್ನೆ ವಿಜ್ಞಾನಿಗಳನ್ನು ವ್ಯಾಪಕವಾಗಿ ಕಾಡಲಾರಂಭಿಸಿತ್ತು. ಬಿಲ್ ಕೇಸಿಂಗ್ ಎಂಬ ಖಗೋಳ ವಿಜ್ಞಾನಿಯಂತೂ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದ್ದೇ ಸುಳ್ಳು ಎಂದು ಪುರಾವೆಗಳೊಂದಿಗೆ ವಾದಿಸಿದರು. ಆರ್ಮ್‌ಸ್ಟ್ರಾಂಗ್ ನಿಂತ ಜಾಗದ ಹಿಂಭಾಗದಲ್ಲೆಲ್ಲೂ ನಕ್ಷತ್ರಗಳೇ ಇಲ್ಲ. ಆತ ಚಂದ್ರನ ಮೇಲೆ ನೆಟ್ಟ ಬಾವುಟ ಗಾಳಿಗೆ ಪಟಪಟಿಸುತ್ತಿದೆ. ಆದರೆ ಚಂದ್ರನ ಮೇಲೆ ವಾತಾವರಣವೇ ಇಲ್ಲ; ಗಾಳಿಯೆಲ್ಲಿಯದು? ರಾಕೆಟ್ಟುಗಳ, ಇಂಜಿನ್ನುಗಳ ಸದ್ದು ಅದೆಷ್ಟು ಜೋರೆಂದರೆ, ಅಕ್ಕ ಪಕ್ಕದವರು ಅರಚಿದರೂ ಕೇಳುವುದಿಲ್ಲ. ಅಂತಹುದರಲ್ಲಿ ಆರ್ಮ್‌ಸ್ಟ್ರಾಂಗ್ ಮಾತನಾಡಿದ್ದನ್ನು ಭೂಮಿಯ ಜನರಿಗೆ ಕೇಳಿಸಲಾಗಿದೆ. ಆ ಮಾತುಗಳ ಹಿಂದೆ ಎಲ್ಲೂ ಎಂಜಿನ್ನಿನ ಸದ್ದೇ ಇಲ್ಲವಲ್ಲ! ಸೂರ್ಯನ ಬೆಳಕು ಬಿಟ್ಟರೆ ಬೇರೆ ಬೆಳಕೇ ಇಲ್ಲದ ಜಾಗದಲ್ಲಿ ಚಂದ್ರದ ಮೇಲೆ ಕಾಲಿಟ್ಟವರ ಚಿತ್ರಗಳು ಸ್ಫುಟವಾಗಿ ಬಂದದ್ದು ಹೇಗೆ? ಕೇಸಿಂಗ್ ಈ ಪ್ರಶ್ನೆಗಳನ್ನು ಮುಂದಿಟ್ಟಾಗ ನಾಸಾದ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದರು. ಕೇಸಿಂಗ್‌ನ ತಲೆ ಕೆಟ್ಟಿದೆ ಎಂದು ವಾದಿಸಿದರು!

ನಿಜ ಹೇಳಬೇಕೆಂದರೆ, ಅಮೆರಿಕ ಖಗೋಳ ವಿಜ್ಞಾನದಲ್ಲಿ ಸಾರ್ವಭೌಮತೆ ಸಾಧಿಸುವ ನೆಪದಲ್ಲಿ ಹೀಗೊಂದು ನಾಟಕ ಹೂಡಿತ್ತು. ೧೯೫೭ ರಲ್ಲಿ ಸ್ಫುಟ್ನಿಕ್ ಉಪಗ್ರಹವನ್ನು ಕಕ್ಷೆಗೆ ಬಿಟ್ಟ ರಷ್ಯಾ ಬಲುದೊಡ್ಡ ಸಾಧನೆ ಮಾಡಿತ್ತು. ಶೀತಲ ಸಮರದ ವೇಳೆಗೆ ರಷ್ಯಾವನ್ನು ಶತಾಯಗತಾಯ ಮೆಟ್ಟಬೇಕೆಂದುಕೊಂಡಿದ್ದ ಅಮೆರಿಕಕ್ಕೆ ಇದು ಬಲುದೊಡ್ಡ ಆಘಾತ. ತಾವು ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಅವರ ಯತ್ನ ವಿಫಲವಾಗಿತ್ತು. ಆಗ ಅಮೆರಿಕಾ ಅಧ್ಯಕ್ಷರು ‘ಹೇಗಾದರೂ ಸರಿಯೇ’ ತಾವು ರಷ್ಯಾಕ್ಕೆ ಪ್ರತ್ಯುತ್ತರ ಕೊಡಲೇಬೇಕೆಂದು ತಾಕೀತು ಮಾಡಿದರು.

ಆ ಮಾತನ್ನು ಪ್ರಸಾದವಾಗಿ ಸ್ವೀಕರಿಸಿದ ನಾಸಾದ ವಿಜ್ಞಾನಿಗಳು, ಚಂದ್ರನ ಮೇಲೆ ಕಾಲಿಟ್ಟು ಬರುವ ಎನ್ನುವುದು ಅವರಿಗೆ ಗೊತ್ತಿತ್ತು. ಆದರೂ ಜನರ ಕಣ್ಣಿಗೆ ಮಣ್ಣೆರಚತೊಡಗಿದರು. ಗ್ರಿಸಮ್ ನೇತೃತ್ವದ ತಂಡವನ್ನು ರಚಿಸಿದರು. ವಿಜ್ಞಾನಿಗಳು ಮೋಸ ಮಾಡುವ ವಿಚಾರ ಗೊತ್ತಾದೊಡನೆ, ಗ್ರಿಸಮ್ ಪ್ರತಿಭಟಿಸಿದ. ಅವನ ಹತ್ಯೆಯೇ ಆಗಿ ಹೋಯಿತು! ಚಂದ್ರನತ್ತ ಹೋಗಬೇಕಿದ್ದ ಅವನ ನೌಕೆ ಭೂಮಿ ಬಿಡುವ ಮುನ್ನವೇ ಭಸ್ಮವಾಯಿತು. ಅವನ ಇತರ ಜತೆಗಾರರು ನಿಗೂಢವಾಗಿ ಕೊಲೆಯಾಗಿಬಿಟ್ಟರು. ಆನಂತರವೇ ನೀಲ್ ಆರ್ಮ್‌ಸ್ಟ್ರಾಂಗ್‌ನ ತಂಡ ರೆಡಿಯಾಗಿದ್ದು. ಆ ತಂಡ ನೌಕೆಯಲ್ಲಿ ಕುಳಿತು ಎಂಟು ದಿನಗಳ ಕಾಲ ಜಗತ್ತಿನ ಪ್ರದಕ್ಷಣೆ ಮಾಡಿ ಏರಿಯಾ ಎನ್ನುವ ಅಮೆರಿಕದ ರಕ್ಷಿತ ಪ್ರದೇಶಕ್ಕೆ ಹೋಗಿ, ಬಗೆಬಗೆಯ ಫೋಟೊ ತಂದಿತು. ಅಲ್ಲಿಂದಲೇ ಆರ್ಮ್‌ಸ್ಟ್ರಾಂಗ್ ಮಾತನಾಡಿ ಭುವಿಯ ಜನರನ್ನು ರೋಮಾಂಚನಗೊಳಿಸಿದ. ಚಂದ್ರ ನೋಡಲಿಕ್ಕೆ ಥೇಟ್ ಅಮೆರಿಕದ ಮರುಭಮಿಯಂತೆ ಇದೆ ಎಂದೂ ನೀಲ್ ಉದ್ಗರಿಸಿದ್ದ. ವಾಸ್ತವವಾಗಿ ಅವನು ಅಮೆರಿಕದ ಮರುಭೂಮಿಯ ಮೇಲೆಯೇ ಇದ್ದ !

ಅಮೆರಿಕ ಜಗತ್ತಿನ ಕಂಗಳಲ್ಲಿ ರಷ್ಯಾಕ್ಕಿಂತಲೂ ಎತ್ತರಕ್ಕೇರಿಬಿಟ್ಟಿತು. ಅವರನ್ನು ಮೀರಿಸುವರೇ ಇಲ್ಲವಾಗಿಬಿಟ್ಟರು. ಇದೇ ಸಂದಭದಲ್ಲಿಯೇ ಅಮೆರಿಕದ ಪೌಲ್ ಲಾಜೆರಸ್, ಮಂಗಳನ ಮೇಲೆ ಕಾಲಿಡುವ ಕ್ಯಾಪ್ರಿಕಾರ್ನ್ ಒನ್ ಎಂಬ ಚಿತ್ರ ನಿರ್ಮಿಸಿದ್ದು. ಈ ಚಿತ್ರ ಇದೇ ರೀತಿ ರಾಷ್ಟ್ರವೊಂದು ಜನರಿಗೆ ಮೋಸ ಮಾಡುವುದನ್ನೇ ಬಂಡವಾಳವಾಗಿಸಿಕೊಂಡಿತ್ತು. ನನ್ನ ಕಡಿಮೆ ಬಜೆಟ್ಟಿನಲ್ಲಿಯೇ ನಾನು ಮಂಗಳನ ಮೇಲೆ ಕಾಲಿಟ್ಟ ಅನುಭವ ನೀಡಲಬಲ್ಲೆನಾದರೆ, ನಲವತ್ತು ಬಿಲಿಯನ್ ಡಾಲರ್‌ಗಳನ್ನು ಸುರಿದ ಅಮೆರಿಕ ಸರಕಾರ ಚಂದ್ರನ ಮೇಲೆ ಕಾಲಿರಿಸಿದ್ದನ್ನು ನಂಬಿಸುವುದು ಕಷ್ಟವಲ್ಲ ಎಂದು ಲಾಜೆರಸ್ ಯಾವಾಗಲೂ ಹೇಳುತ್ತಿದ್ದ! ಹೌದು. ಅದು ಭೂಮಿಯ ಮೇಲಿನ ಇದುವರೆಗಿನ ಕಾಸ್ಟ್ಲಿ ಮೋಸ, ಕಾಸ್ಟ್ಲಿಯೆಸ್ಟ್ ಸಿನಿಮಾ!

ಈ ಹಿನ್ನೆಲೆಯಲ್ಲಿಯೇ ಅಮೆರಿಕ ಯಾವುದಕ್ಕೆ ಕೈಯಿಟ್ಟರೂ ಹೆದರಿಕೆಯಾಗೋದು. ಅಲ್ಲಿ ಕೊಲೆಗಳಾಗಿಬಿಡುತ್ತವೆ. ಸತ್ಯ ಹುದುಗಿಸುವ ಪ್ರಯತ್ನಗಳ ಹಿಂದೆ ಘೋರ ಪಾತಕಗಳೂ ನಡೆದುಬಿಡುತ್ತವೆ! ಕಲ್ಪನಾ ಚಾವ್ಲಾಳ ಸಾವು ಕೂಡ ಅನುಮಾನವಾಗಿ ಕಾಡುವುದು ಇದಕ್ಕೇ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳೆಂದು ಕರೆದುಕೊಳ್ಳುವ ನಾಸಾದವರು ಸಂಪೂರ್ಣ ವಿಫಲರಾಗಿಬಿಟ್ಟ ಯೋಜನೆ ಅದು. ತಮ್ಮ ವಿಫಲತೆಯನ್ನು ಮರೆಮಾಚಲು ಸತ್ತವರ ಬಗೆಗಿನ ಭಾವನೆಗಳನ್ನು ಬಡಿದೆಬ್ಬಿಸಿದರು. ತಾವು ಮತ್ತೆ ಗ್ರೇಟ್ ಆಗಿಬಿಟ್ಟರು! ಧೂಮಕೇತುವಿಗೆ ಡೀಪ್ ಇಂಪ್ಯಾಕ್ಟ್ ಮಾಡಿದ್ದೂ ಅದೇ ಹಿನ್ನೆಲೆಯ ಕಥೆ. ತನ್ನ ಪಾಡಿಗೆ ತಾನು ಸೂರ್ಯನ ಸುತ್ತುವ ಕಾಯವೊಂದಕ್ಕೆ ಹೋಗಿಡಿಕ್ಕಿ ಹೊಡೆದು ಇವರು ಮಾಡುವುದಾದರೂ ಏನು ಹೇಳಿ? ಅಕಸ್ಮಾತ್ ಇವರಿಟ್ಟ ಒಂದು ತಪ್ಪು ಹೆಜ್ಜೆ, ಇಡಿಯ ವಿಶ್ವ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿಬಿಟ್ಟರೆ ಗತಿ ಯಾರು? ನಾಲ್ಕಾರು ನದಿಗಳನ್ನು ಜೋಡಿಸೋಣ ಎನ್ನುವ ಮಾತಿಗೇ ನಾವು ಚರ್ಚೆಗಿಳಿಯುತ್ತೇವೆ, ಬಡಿದಾಡುತ್ತೇವೆ. ದೇಶ ಮರುಭೂಮಿಯಾಗಿಬಿಡುತ್ತದೆಂದು ಗೋಳಿಡುತ್ತೇವೆ. ಅಂತಹುದಲ್ಲಿ ಯಾರೊಂದಿಗೂ ಚರ್ಚಿಸದೇ, ತನ್ನ ಮೂಗಿನ ನೇರಕ್ಕೇ ಆಲೋಚಿಸಿ ಅಕಾಶಕಾಯಗಳ ಸುದ್ದಿಗಿಳಿಯುವ ಹಕ್ಕು ಅಮೆರಿಕಕ್ಕೆ ಕೊಟ್ಟವರು ಯಾರು?

ಆದರೆ ಅಮೆರಿಕವನ್ನು ಹೀಗೆ ಪ್ರಶ್ನಿಸಲಿಕ್ಕೆ ಯಾರೂ ಮುಂದಾಗೋದೇ ಇಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ದಿನ, ಅದು ಮೋಸ ಎಂದು ಯಾರಾದರೂ ಹೇಳಿದ್ದರೆ ಅವರು ಪೆಟ್ಟು ತಿನ್ನುತ್ತಿದ್ದರು. ಡಬ್ಲು ಟಿ ಸಿ ಕಟ್ಟಡಗಳು ಉರುಳಿದಾಗ ಅದರ ಹಿಂದೆಯೂ ಅಮೆರಿಕದ್ದೇ ಕೈವಾಡವಿದೆ ಎಂದಾಗ ಬೊಗಳೆ ಎಂದಿದ್ದರು. ಅಪ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲು ಅಮೆರಿಕ ಹೂಡಿದ ನಾಟಕವಿದು ಎಂದರೂ ಯಾರೂ ಕೇಳಿರಲಿಲ್ಲ. ಈಗ ನೋಡಿ, ಪರದೆ ಸರಿದು ಸತ್ಯ ಹೊರಬರಲಾರಂಭಿಸಿದೆ. ಅಮೆರಿಕದ ರಾದ್ಧಾಂತಗಳು ಅಥವಾಗುತ್ತಿವೆ!

Comments Posted (0)