ಕಂಡವರ ದುಡ್ಡಿಗೆ, ಜೀವಕ್ಕೆ ಬೆಲೆಯೇ ಇಲ್ವಾ?

Posted by ಅರುಂಧತಿ | Posted in | Posted on 7:09 AM

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಏಯ್ಡ್ಸ್ ರೋಗಿಗಳಿಗೆ ಕೊಡುವ ಔಷಧದಲ್ಲಿ ಹೇರಾಫೇರಿ ನಡೆಯುತ್ತಿದೆ. ವಿದೇಶೀ ಔಷಧ ಕಂಪೆನಿಗಳ ಎಕ್ಸ್ ಪೆರಿಮೆಂಟಿಗೆ ನಮ್ಮ ಜನರು ಬಲಿಪಶುಗಳಾಗ್ತಿದಾರೆ.
ಮೊನ್ನೆ ’ಔಷಧ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಜೀವಗಳು’ ಲೇಖನವನ್ನೋದಿದ ಕೆಲವು ಪರಿಚಿತರು, “ನೀವು ಹೇಳುವಷ್ಟೆಲ್ಲ ಕುಲಗೆಟ್ಟುಹೋಗಿಲ್ಲ ಬಿಡ್ರಿ! ಸುಮ್ನೆ ಎಲ್ಲಾವ್ದನ್ನೂ ಎಕ್ಸಾಸಿರೇಟ್ ಮಾಡ್ತೀರ” ಅಂದುಬಿಟ್ಟಿದ್ದರು. ಆಗ ನಾನು ತೀರ ನನ್ನ ಸುತ್ತ ಮುತ್ತಲೇ ನಡೆದ ಕೆಲವು ಘಟನೆಗಳನ್ನ ಹೇಳಿ ವಿಷಯದ ಗಂಭೀರತೆಯನ್ನ ಮನದಟ್ಟು ಮಾಡಿಸಬೇಕಾಯ್ತು. ಮತ್ತಿವತ್ತು ಬಂದಿದೆ ಈ ಆಘಾತಕಾರಿ ಸುದ್ದಿ.
ಖಾಸಗಿ ವೈದ್ಯರದೊಂದು ರೀತಿಯ ಹಗಲು ದರೋಡೆಯಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತೊಂದು ಬಗೆಯ ಕಳ್ಳತನ.
ಒಂದು ವರ್ಷದ ಹಿಂದಿನ ಮಾತು. ನನ್ನ ಊರು ಹೊನ್ನಾವರದಲ್ಲಿ, ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯ ರೋಗಕ್ಕೆ ಮಾತ್ರೆಗಳನ್ನ ಹಂಚುತ್ತಿದ್ದರು. ಪಾಪ ಊರ ಜನ ತುಂಬ ಶ್ರದ್ಧೆಯಿಂದ ಅದನ್ನು ತೆಗೆದುಕೊಳ್ಳುತ್ತಿದ್ದರು.
ವಾರ, ತಿಂಗಳು… ಊಹೂಂ… ಎಷ್ಟು ದಿನ ಕಾದರೂ ಫಲಿತಾಂಶ ಮಾತ್ರ ಸೊನ್ನೆ!
ಆ ಊರಿನ ಒಬ್ಬ ಕುತೂಹಲಿ ಯುವಕ ಆ ಕ್ಯಾಪ್ಸೂಲನ್ನು ಸುಮ್ಮನೆ ನುಂಗದೆ, ಅದನ್ನ ಬಿಚ್ಚಿ ನೋಡಿದ. ಅದರಲ್ಲೇನಿತ್ತು ಮಣ್ಣು!? ಪೂರ್ತಿ ಖಾಲಿ!!
ಊರವರೆಲ್ಲ ಸೇರಿದರು. ಆಸ್ಪತ್ರೆಯಲ್ಲಿದ್ದ ಅಷ್ಟೂ ಕ್ಷಯದ ಮಾತ್ರೆಗಳನ್ನ ನೋಡಲಾಯ್ತು. ಎಲ್ಲವೂ ಹಾಗೇ ಖಾಲಿ ಖಾಲಿಯಾಗಿ ಬಾಯಿ ಕಳೆದುಕೊಂಡುಬಿದ್ದಿದ್ದವು!
ಅಷ್ಟೂ ದಿನ ನಂಬಿಕೆಯಿಂದ ಮಾತ್ರೆಗಳನ್ನ ನುಂಗಿದ್ದ ಜನರಿಗೆ ಎಂಥ ಆಘಾತವಾಗಿರಬೇಡ ಹೇಳಿ?
ಮತ್ತೊಂದು ಇಂಥದೇ ಕೇಸು. ಇದನ್ನ, ಲೇಖನ ಓದಿದ ನನ್ನ ಗೆಳೆಯ ರಾಜೇಶ ಹೇಳಿದ್ದು.
ಆತನ ಅಕ್ಕನಿಗೆ ಹೊಟ್ಟೆ ನೋವು ಅಂತ ದೊಡ್ಡ ನರ್ಸಿಂಗ್ ಹೋಮ್ ಒಂದಕ್ಕೆ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಿ ಅವರನ್ನ ಹೊರಗೆ ಹತ್ತು ನಿಮಿಷ ಕಾಯಿಸಿ, ’ಅಪೆಂಡಿಸೈಟಿಸ್’ ಅಂತ ರಿಪೋರ್ಟು ಕೊಟ್ಟರು. ಆಪರೇಷನ್ನೇ ಗತಿ! ಮಗು ಇನ್ನೂ ಸಣ್ಣದು. ನೋಡೀಕೊಳ್ಳೋರ್ಯಾರು?
ರಾಜೇಶ ಕೊಂಚ ತಲೆ ಓಡಿಸಿ, ಇನ್ನೂ ಆರಂಭದ ಹಂತದ್ದಾದ್ದರಿಂದ ಸಧ್ಯಕ್ಕೆ ಆಪರೇಷನ್ನು ಬೇಡವೆಂದ. ಮತ್ತೆ ನೋವು ಹೆಚ್ಚಾದರೆ ಆಸ್ಪತ್ರೆಗೆ ಬರುವುದು ಅಂದುಕೊಂಡು ಮನೆ ದಾರಿ ಹಿಡಿದರು.
ಅದಾಗಿ ಒಂದೆರಡು ತಿಂಗಳು ಆಕೆಗೆ ಹೊಟ್ಟೆ ನೋವು ಬರಲೇ ಇಲ್ಲ. ಮತ್ತೊಮ್ಮೆ ರಾಜೇಶ ಮನೆ ಬಳಿಯ ವೈದ್ಯರ ಹತ್ತಿರ ಆಕೆಯನ್ನ ಕರೆದುಕೊಂಡು ಹೋಗಿ ಅಪೆಂಡಿಕ್ಸ್ ಯಾವ ಹಂತದಲ್ಲಿದೆ ಎಂದು ವಿಚಾರಿಸಿದರೆ, ಅವರು ಅಚ್ಚರಿಪಟ್ಟುಬಿಟ್ಟರು. ಅಸಲಿಗೆ ಆಕೆಗೆ ಅಪೆಂಡಿಕ್ಸ್ ಇಲ್ಲವೇ ಇಲ್ಲವೆಂದೂ, ಯಾರದೋ ರಿಪೋರ್ಟ್ ಅವರಿಗೆ ತೋರಿಸಲಾಗಿದೆಯೆಂದೂ ಆ ವೈದ್ಯರು ಹೇಳಿದಾಗ ಅಚ್ಚರಿಯಾಗುವ ಸರದಿ ರಾಜೇಶ ಮತ್ತವನ ಅಕ್ಕನದು! ಈ ಒಟ್ಟು ಘಟನೆ ನಡೆದು ಆರು ವರ್ಷಗಳಾಗಿವೆ. ರಾಜೇಶನ ಅಕ್ಕ, ಒಂದಷ್ಟು ಗ್ಯಾಸ್ಟ್ರಿಕ್ ಸಮಸ್ಯೆ ಹೊರತುಪಡಿಸಿದರೆ, ಆರಾಮಾಗಿಯೇ ಇದ್ದಾರೆ!
ದೊಡ್ಡ ಆಸ್ಪತ್ರೆಯ ಡಾಕ್ಟ್ರುಗಳನ್ನ ನೆಚ್ಚಿಕೊಂಡು ಆಪರೇಷನ್ನಿಗೆ ಸಮ್ಮತಿಸಿದ್ದರೆ, ಏನೂ ಸಮಸ್ಯೆಯಿಲ್ಲದ ಹೊಟ್ಟೆ ಕೊಯ್ದು ಅವರೇನು ಮಾಡುತ್ತಿದ್ದರು?
ಕಿಡ್ನಿ ಕದಿಯುತ್ತಿದ್ದರೇ? ಅರಿವಳಿಕೆ ಕೊಟ್ಟು ಮಲಗಿಸಿ……!? ಅಥವಾ ಓ.ಟಿ. ಒಳಗೆ ಕರೆದೊಯ್ದು ತಮ್ಮ ಪಾಡಿಗೆ ತಾವು ಟೈಂ ಪಾಸ್ ಮಾಡಿ ಹೊರಬರುತ್ತಿದ್ದರೆ? ಯಾರು ಉತ್ತರಿಸುವರು ಹೇಳಿ? ವೈದ್ಯರು ಯಾಕೆ ಹೀಗೆ ಮಾಡ್ತಾರೆ? ಕಂಡವರ ಜೀವಕ್ಕೆ, ಅವರ ದುಡ್ಡಿಗೆ ಬೆಲೆಯೇ ಇಲ್ವಾ?
ಹಾಗಂತ ವೈದ್ಯರೆಲ್ಲ ಕೆಟ್ಟವರು, ಅಂತ ನಾನು ಹೇಳ್ತಿಲ್ಲ. ವೈದ್ಯ ವೃತ್ತಿಗೊಂದು ಘನತೆ ತಂದುಕೊಟ್ಟು ಮಾನವೀಯತೆ ಮೆರೆಯುತ್ತಿರುವ ಸಾಕಷ್ಟು ಜನರು ನಮ್ಮೊಂದಿಗಿದ್ದಾರೆ. ಅವರ ಬಗ್ಗೆ ಮತ್ತೆಂದಾದರೂ ಹೇಳುವೆ. ಆದರೆ ಅಂಥವರ ಸಂಖ್ಯೆ ಬೆರಳೆಣಿಕೆಯಷ್ಟು ಎನ್ನುವುದೇ ಖೇದದ ಸಂಗತಿ.
ಇವತ್ತಿನ ಪತ್ರಿಕೆಯಲ್ಲೊಂದು ಮತ್ತೊಂದು ಸುದ್ದಿ. ಗ್ರಾಮೀಣ ಸೇವೆ ಕಡ್ಡಾಯ ವಿರೋಧಿಸಿ ವೈದ್ಯ ವಿದ್ಯಾರ್ಥಿಗಳು ಧರಣಿ ಮಾಡಿದ ಕುರಿತು… ಅದಕ್ಕೆ ಪ್ರತಿಕ್ರಿಯೆ ಕೂಡ ನೀಡಲಾಗದಷ್ಟು ಮನಸ್ಸು ಮುರಿದುಹೋಗಿದೆ. ವೈದ್ಯಕೀಯ ಸೇವೆ ಅನ್ನುವುದು, ಹಣ ಮಾಡುವ ದಂಧೆಯಾಗಿದ್ದು ಯಾವಾಗ?
ಇರಲಿ. ಇವತ್ತು ನಾನು ಮತ್ತೆ ಇವೆಲ್ಲವನ್ನೂ ಬರೆಯಲು ಕಾರಣವಿದೆ.
ಹಿಂದಿನ ಲೇಖನದಲ್ಲಿ ನಾನು ಉಲ್ಲೇಖಿಸಿದ್ದ ನನ್ನ ಪ್ರೀತಿಯ ಮೇಷ್ಟ್ರು ನಮ್ಮನ್ನಗಲಿ ಹೋಗಿಬಿಟ್ಟರು.
ಆಪರೇಷನ್ನು, ಅದಕ್ಕೆ ದುಡ್ಡು ಹೊಂದಿಸುವ ಪೀಕಲಾಟ, ಜೀವ ಬಾಯಿಗೆ ತರುವ ಬಿಕ್ಕಳಿಕೆ… ಇವೆಲ್ಲವನ್ನೂ ಬಿಟ್ಟು ನಡೆದುಬಿಟ್ಟರು. ಒಂದು ತಿಂಗಳ ಅವಧಿಯಲ್ಲಿ ನಡೆದ ಈ ದುರಂತಕ್ಕೆ ಅವರ ಕುಟುಂಬ ಭರಿಸಿದ್ದು (ವ್ಯಯಿಸಿದ್ದು ಅನ್ನದೆ ವಿಧಿ ಇಲ್ಲ) ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗಳು!
ಈಗ ತಾನೇ ಅವರ ಅಂತ್ಯ ಸಂಸ್ಕಾರ ಮುಗಿಸಿ ಬಂದೆ. ನಿಮ್ಮೆದುರು ನೋವು ಹಂಚಿಕೊಳ್ಳಬೇಕನಿಸಿತು. ಅಷ್ಟೇ…

Comments Posted (0)