ವಾಲ್ ಮಾರ್ಟ್ ಮತ್ತು ಇತಿಹಾಸದ ಪಾಠ…

Posted by ಅರುಂಧತಿ | Posted in | Posted on 7:08 AM

ಎಲ್ಲರಿಗೂ ನಮಸ್ತೇ.

ವಿಕ್ರಮ್ ಹತ್ವಾರ್ ಅವರು ತಮ್ಮ ಕಮೆಂಟಿನಲ್ಲಿ ವಾಲ್ ಮಾರ್ಟ್ ಬಗ್ಗೆ ಮಾತನಾಡಿದ್ದರು. ಹೀಗೆ ವಾಲ್ ಮಾರ್ಟ್ ವಿಷಯ ಬಂದಾಗ ನಾನು ಹೇಳಲೇಬೇಕಾದ ಒಂದಷ್ಟಿದೆ. ಅದನ್ನೀಗ ಇಲ್ಲಿ ನಿಮ್ಮೆದುರಿಡುವೆ.

ನಿಮ್ಮಲ್ಲಿ ಬಹುತೇಕರಿಗೆ ಶೂ ಕಂಪೆನಿಯ ಸೇಲ್ಸ್ ಮನ್ ಗಳಿಬ್ಬರು ಆಫ್ರಿಕಾಕ್ಕೆ ಹೋದ ಹಳೆಯ ಕಥೆ ಗೊತ್ತಿರಬಹುದು.
ಹಾಗೆ ಹೋದ ಇಬ್ಬರಲ್ಲಿ ಒಬ್ಬ ವಾಪಸು ಬಂದು ಮ್ಯಾನೇಜರನ ಬಳಿ ದೂರಿದ. “ಅಲ್ಲಿನ ಜನರಿಗೆ ಶೂ ಅಂದರೇನೆಂದೇ ಗೊತ್ತಿಲ್ಲ, ಅಲ್ಲಿ ವ್ಯಾಪಾರ ಕಷ್ಟ!” ಸ್ವಲ್ಪ ಹೊತ್ತಿನಲ್ಲೇ ಮತ್ತೊಬ್ಬ ಏದುಸಿರು ಬಿಡುತ್ತಾ ಬಂದು ಹೇಳಿದ, ” ನಮ್ಮ ಪುಣ್ಯ! ಅಲ್ಲಿ ಯಾವುದೇ ಶೂ ಕಂಪೆನಿ ಇಲ್ಲ. ನಾವೇ ಮೊದಲು. ಭರ್ಜರಿ ಸೇಲು!!” ಎಂದ…

ಅದು ಅಂತಾರಾಶ್ಟ್ರೀಯ ಮಾರುಕಟ್ಟೆಯ ನೀತಿ. ಜನ ವಸ್ತುಗಳನ್ನು ಬೇಕಾಬಿಟ್ಟಿ ಕೊಳ್ಳುವಂತೆ ಮಾಡಬೇಕು. ಹಾಗಾದಾಗಲೇ ದೊಡ್ಡ ಕಂಪೆನಿಗಳ ಮಾಲೀಕರಿಗೆ ಸಮಾಧಾನ. ಈ ಕೊಳ್ಳುಬಾಕತನ ನಮ್ಮಲ್ಲಿ ಅದೆಷ್ಟು ಹೆಚ್ಚಾಗಿದೆಯೆಂದರೆ, ಮೊದಮೊದಲು ಪ್ರತಿಷ್ಠೆಯ, ಶ್ರೀಮಂತಿಕೆಯ ಸಂಕೇತವೆನಿಸಿದ್ದ ವಸ್ತುಗಳೂ ಈಗ ದೈನಂದಿನ ಅಗತ್ಯದ ವಸ್ತುಗಳೆನಿಸಿ, ಅದೇ ನೆವದಲ್ಲಿ ಸಾಲ ಮಾದಿಯಾದರೂ ತರಲೇಬೇಕೆನ್ನುವ ಅನಿವಾರ್ಯತೆ ಸೃಷ್ಟಿಸಿಕೊಂಡು, ಮನೆ ತುಂಬಿಬಿದ್ದಿವೆ. ಈಗ ವಾಲ್ ಮಾರ್ಟ್ ಭಾರತಕ್ಕೆ ಕಾಲಿಡುತ್ತಿರುವುದು, ಈ ಬೇಕುಗಳಿಗೆಲ್ಲ ಹೊಸ ಆಯಾಮ ನೀಡಲೆಂದೇ.

ವಾಲ್ ಮಾರ್ಟ್ ಗಳೆಂದರೆ, ನಮ್ಮ ಸೂಪರ್ ಮಾರ್ಕೆಟ್, ಬಿಗ್ ಬಜಾರ್ ಗಳಿಗಿಂತ ಐವತ್ತು ಪಟ್ಟು, ನೂರು ಪಟ್ಟು ದೊಡ್ಡದಾಗಿರುವ ಅಂಗಡಿಗಳು- ಶಾಪಿಂಗ್ ಮಾಲ್ ಗಳು.

ನಿಮಗೆ ನೆನಪಿರಬಹುದು. ಈ ಹಿಂದೆ ಮೆಟ್ರೋ ಬೆಂಗಳೂರಿಗೆ ಬಂದಾಗ ಸಾವಿರಾರು ಸಣ್ಣ ಸಣ್ಣ ವ್ಯಪಾರಿಗಳು ಮುಷ್ಕರ ಹೂಡಿದ್ದರು. ಅವತ್ತು ಸರ್ಕಾರದ ಸೆರಗು ಹಿಡಿದ ಮೆಟ್ರೋ, ನಾವು ಹೋಲ್ ಸೇಲ್ ಮಾರಾಟಗಾರರೆಂದು ಕಣ್ಣೊರೆಸಿತ್ತು. ಅನಂತರ ಇಲ್ಲಿ ತಳವೂರಿದ ಮೇಲೆ ರೀಟೇಲ್ ದಂಧೆಗಿಳಿದು, ಕೆಲ ಕಾಲ ಅಕ್ಕಪಕ್ಕದ ವ್ಯಾಪಾರಿಗಳು ನೀರು ಕುಡಿಯುವಂತೆ ಮಾಡಿತ್ತು.

ಎಲ್ಲಾ ಸರಿ. ಆದರೆ ಆಮೇಲಿನ ಮಜಾ ನೋಡಿ… ವಾಲ್ ಮಾರ್ಟ್ ಭಾರತಕ್ಕೆ ಬರುವ ಸುದ್ದಿ ಕೇಳಿ ಮೆಟ್ರೋ ಅದುರಿ ಬಿತ್ತು. ಬರಲು ಬಿಡಬೇಡಿ ಎಂದು ಸರಕಾರಕ್ಕೆ ಒತ್ತಡ ತಂದಿತು. ವಾಲ್ ಮಾರ್ಟ್ ಭಾರತಕ್ಕೆ ಬಂದರೆ ನಾವು ಸತ್ತೇ ಹೋಗಿಬಿಡುತ್ತೇವೆಂದು ಆತಂಕ ಅದಕ್ಕೆ! ಅಂದ ಮೇಲೆ ಅದರ ವ್ಯಾಪಾರ ಪರಿಧಿ ಅದೆಷ್ಟು ದೊಡ್ಡದು ಊಹಿಸಿಕೊಳ್ಳಿ.

“ಅಗ್ಗದ ಬೆಲೆಗೆ ವಸ್ತುಗಳ ಮಾರಾಟ, ಹೆಚ್ಚು ಪ್ರಮಾಣದಲ್ಲಿ ಮಾರಾಟ” ಇದು ವಾಲ್ ಮಾರ್ಟ್ ವ್ಯಾಪಾರ ನೀತಿ. ಸಾವಿರಾರು ಎಕರೆಗಳಲ್ಲಿ ಹರಡಿಕೊಂಡ ಮಳಿಗೆಗಳಲ್ಲಿ ಸಿಗದೇ ಇರುವುದು ಏನೂ ಇಲ್ಲ ಎಂಬುದು ಅದರ ಘೋಷಣೆ. ವಾಲ್ ಮಾರ್ಟ್ ನಲ್ಲಿ ’ಎಲ್ಲವೂ’ ಸಿಗುವ ಬಗ್ಗೆ ಹೀಗೊಂದು ಕಥೆಯಿದೆ. ವಾಲ್ ಮಾರ್ಟನ್ನು ಪರೀಕ್ಷಿಸಲೆಂದೇ ಅಮೆರಿಕದ ಅಧ್ಯಕ್ಷರೊಬ್ಬರು ಅಲ್ಲಿಗೆ ಭೇಟಿಯಿತ್ತಿದ್ದರಂತೆ. ಹಾಗೆ ವಾಲ್ ಮಾರ್ಟ್ ಪಡಸಾಲೆಯಲ್ಲಿ ನಿಂತ ಅವರು ಕೇಳಿದ್ದು ಒಂದು ಆನೆಯನ್ನು! ಕೂಡಲೇ ಒಳಗಿದ್ದ ಸೇಲ್ಸ್ ಮನ್ “ಸರ್, ಬಿಳಿ ಆನೆ ಕೊಡಲೋ, ಕರಿಯದ್ದೋ?” ಎಂಡು ಮಂದಸ್ಮಿತನಾಗಿ ಕೇಳಿದನಂತೆ. ಆಗ ಅಧ್ಯಕ್ಷರು ಕಕ್ಕಾಬಿಕ್ಕಿ!

ಇದು ವದಂತಿಯೇ ಇರಬಹುದಾದರೂ ಮಾರ್ಟ್ ನ ಕಾರ್ಯವೈಖರಿ ಹಾಗೆಯೇ ಇದೆ.

ಸಾಲುಗಟ್ಟುವ ಸಮಸ್ಯೆಗಳು…

ವಾಲ್ ಮಾರ್ಟ್ ಭಾರತಕ್ಕೆ ಬರುವುದರಿಂದ ಈಗಲೇ ಅರ್ಧ ಮಲಗಿರುವ ನಮ್ಮ ಸಣ್ಣ ವಹಿವಾಟುದಾರರು ಪೂರ್ತಿ ನಿತ್ರಾಣರಾಗಿ ಅಂಗಾತ ಮಲಗೋದು ಖಚಿತ. ನಮ್ಮಲ್ಲಿ 12 x 12 ರಷ್ಟಿರುವ ಅಂಗಡಿಗಳು ಒಂದು ಕೋಟಿಯಷ್ಟಾದರೂ ಇವೆ. ದೊಡ್ಡ ದೊಡ್ಡ ಕಂಪೆನಿಗಳು ಮುಚ್ಚಿದಾಗ, ವಿ ಆರ್ ಎಸ್ ದೊರೆತಾಗ, ಎಕ್ಸಾಮ್ ಫೇಲ್ ಆದಾಗ, ಪೆನ್ಶನ್ ಹಣಾ ಬಂದಾಗಲೆಲ್ಲಾ ನಮ್ಮವರು ಒಂದು ಅಂಗಡಿ ತೆರೆದು ಕುಳಿತುಬಿಡುತ್ತಾರೆ. ಅದು ಸಲೀಸು. ಸಣ್ಣ ಪ್ರಮಾಣದ ಆದಾಯವೂ ಗ್ಯಾರೆಂಟಿ. ಆದರೆ ವಾಲ್ ಮಾರ್ಟ್ ಬಂದಮೇಲೆ ಅದೆಲ್ಲ ಬರೀ ಕನಸಾಗಿ ಉಳಿಯಲಿದೆ. ಬರಿ ಬನಶಂಕರಿಯ ಪುಟ್ಟ ಬಿಗ್ ಬಜಾರ್ ಅದೆಷ್ಟು ಚಿಕ್ಕ ಅಂಗಡಿಗಳನ್ನು ಕಮರಿ ಹಾಕಿದೆ ಗೊತ್ತೇ!?

ಸಧ್ಯದ ಮಟ್ಟಿಗೆ ವಾಲ್ ಮಾರ್ಟ್ ವ್ಯಾಪಾರೀ ಜಗತ್ತಿನಲ್ಲಿ ದೈತ್ಯ. ಅಮೆರಿಕದಿಂದ ಹೊರಗೆ ಸುಮಾರು ೩ ಲಕ್ಷ ಕಾರ್ಮಿಕರು ಅದರಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಗತ್ತಿನೆಲ್ಲೆಡೆ ವಾಲ್ ಮಾರ್ಟ್ 120ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಪ್ರತಿ 42 ಗಂಟೆಗೊಂದು ಹೊಸ ಅಂಗಡಿ ತೆರೆಯುವ ಛಾತಿ ತನಗಿದೆ ಎಂದೂ ಅದು ಹೇಳಿಕೊಂಡಿದೆ.
ಈ ಕಂಪೆನಿಯ ಕಾರ್ಯಶೈಲಿ ತುಂಬ ಸರಳ. ಆಯಾ ದೇಶದ ಅತಿ ದೊಡ್ಡ ರೀಟೇಲರ್ ಗಳನ್ನು ಗುರುತಿಸಿ ಅವರನ್ನೇ ಖರೀದಿಸಿಬಿಡೋದು. ಆ ಮೂಲಕ ತಮ್ಮ ವಿರುದ್ಧ ಸೆಣೆಸಬಲ್ಲ ಒಬ್ಬ ದೊಡ್ಡ ವೈರಿಯನ್ನು ಒಂದೇ ಹೊಡೆತಕ್ಕೆ ಮಲಗಿಸಿದಂತೆ ಆಯಿತು! ಅವರನ್ನು ಬಳಸಿಕೊಂಡೇ ವಾಲ್ ಮಾರ್ಟ್ ತನ್ನ ಹೆಸರು ಜನರಿಗೆ ಒಗ್ಗುವಂತೆ ಮಾಡುತ್ತದೆ. ನಂತರ ಇದ್ದೇ ಇದೆ. ಇತರೆಡೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಮಾರುತ್ತೇವೆ ಎಂದು ಜಾಹೀರಾತುಗಳನ್ನು ತಗುಲಿಹಾಕೋದು. ನಮಗೆ ಅನಿವಾರ್ಯವಲ್ಲದ ವಸ್ತುಗಳೂ ಕಡಿಮೆ ಬೆಲೆಗೆ ದೊರೆಯುತ್ತವೆ ಎಂದರೆ ಯಾರು ಬೇಡವೆನ್ನುತ್ತಾರೆ ಹೇಳಿ? ಸರಿ. ಇದರ ಪರಿಣಾಮ, ವಾಲ್ ಮಾರ್ಟ್ ಗೆ ಭರ್ಜರಿ ವ್ಯಾಪಾರ. ಆ ಪ್ರದೇಶದ ಆಸುಪಾಸು 40 ಮೈಲುಗಳವರೆಗೂ ಚಿಕ್ಕ ಅಂಗಡಿಗಳಿಗೆ ವ್ಯಾಪಾರ ಖೋತಾ! ಅದನ್ನೇ ನೆಚ್ಚಿ ಬದುಕು ನಡೆಸುವ ಸಂಸಾರಗಳು ಬೀದಿಪಾಲು.

ನಮ್ಮದು ಬಿಡಿ. ಮುಂದುವರೆದ, ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರುವ ಇಂಗ್ಲೆಂಡಿನಲ್ಲೂ ಹೀಗೇ ಆಗಿತ್ತು. ಪಟ್ಟಣದ ಹೊರವಲಯದಲ್ಲಿ ಒಂದು ವಾಲ್ ಮಾರ್ಟ್ ನ ದೊಡ್ಡ ಮಾಲ್ ಶುರುವಾಯ್ತು. ’ಟ್ರಾಫಿಕ್ ಕಿರಿಕಿರಿ ಬಿಡಿ, ಊರ ಹೊರಗೆ ಆರಾಮವಾಗಿ ಶಾಪಿಂಗ್ ಮಾಡಿ’ ಎಂಬ ಜಾಹೀರಾತಿಗೆ ಮರುಳಾದ ಜನ ಹಿಂಡುಹಿಂಡಾಗಿ ಲಗ್ಗೆ ಇಟ್ಟರು. ಅತ್ತ ಪಟ್ಟಣಾದೊಳಗಿನ ಅಂಗಡಿಗಳು ಖಾಲಿಖಾಲಿ. ಕೊನೆಗೆ ಕೈಲಾದವರು ಪೇಟೆಯೊಳಗಿನ ತಮ್ಮ ಅಂಗಡಿಗಳನ್ನು ಮುಚ್ಚಿ ತಾವೂ ಊರ ಹೊರಗೆ ಅಂಗಡಿಗಳನ್ನು ತೆರೆದು ಕುಳಿತರು! ತನಿಖೆ ನಡೆದು ವರದಿ ಸರ್ಕಾರದ ಮೇಜಿಗೆ ಹೋಯ್ತು. ಒಂದು ಸೂಪರ್ ಮಾರ್ಕೆಟ್ 276 ಜನ ಸ್ಥಳೀಯರ ಉದ್ಯೋಗ ಕಸಿಯುತ್ತೆ ಎಂಬ ಆಘಾತಕಾರಿ ಅಂಶ ಬಯಲಿಗೆ ಬಂತು. ಆದರೇನು? ಅಷ್ಟಾರಲ್ಲಾಗಲೇ ವಾಲ್ ಮಾರ್ಟ್ ಇಂಗ್ಲೆಂಡಿನ ಜನಜೀವನದ ಅಂಗವಾಗಿಬಿಟ್ಟಿತ್ತು.

ಮೆಕ್ಸಿಕೋದಲ್ಲಿ, ಅದರ ಶೇ 50ರಷ್ಟು ವ್ಯಾಪಾರ ವಾಲ್ ಮಾರ್ಟ್ ಹಿಡಿತದಲ್ಲಿದೆ. ಅಂದರೆ, ಆ ದೇಶದ ಅರ್ಧದಷ್ಟು ವ್ಯಾಪಾರಿಗಳು ಮಾರ್ಟ್ ನ ಅಡಿಯಾಳುಗಳು. ಆ ಮೂಲಕ ಇಡಿಯ ಸರ್ಕಾರವೇ ಅದಕ್ಕೆ ಅಧೀನ! 2004ರಲ್ಲಂತೂ ವಾಲ್ ಮಾರ್ಟ್, ಉತ್ಪಾದಕರು ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಬೇಕೆಂದು ತಾಕೀತು ಮಾಡಿದ್ದರಿಂದ ಬಡ ಉತ್ಪಾದಕರು ನೇಣಿಗೆರುವ ಪ್ರಸಂಗ ನಿರ್ಮಾಣವಾಗಿಹೋಗಿತ್ತು! ಇದೇ ರೀತಿಯ ಪರಿಸ್ಥಿತಿಯಿಂದಾಗಿ ಇಂಡೋನೇಷಿಯಾದ ಆರ್ಥಿಕತೆ ಗಂಭೀರ ಸ್ಥಿತಿ ತಲುಪಿ, ಸರ್ಕಾರವೇ ದಿವಾಳಿಯ ಅಂಚಿಗೆ ಬಂದು ನಿಂತಿತ್ತು!
ಇನ್ನು, ನೆರೆಯ ಚೀನಾಕ್ಕೆ ಮಾರ್ಟ್ ನುಗ್ಗಿದ್ದು 1996ರಲ್ಲಾದರೆ, ತನ್ನ ಮೊದಲ ದಾಳ ಎಸೆದಿದ್ದು 2003ರಲ್ಲಿ. ಅದಾದ ಎರಡೇ ವರ್ಶಗಳಾಲ್ಲಿ ಅದು ಬರೋಬ್ಬರಿ 22ಅಂಗಡಿಗಳನ್ನು ತೆರೆದು ಕುಳಿತಿತು. ಇಂದು ಅದು ತನ್ನ ಬೆರಳ ತುದಿಯಲ್ಲಿ ಆ ದೇಶವನ್ನು ಕುಣಿಸುತ್ತಿದೆ!

ಹೌದು. ವಾಲ್ ಮಾರ್ಟ್ ಭಾರತಕ್ಕೆ ಬರುವ ಪ್ರಕ್ರಿಯೆಗೆ ಚಾಲನೆ ದೊರಕಿ ವರ್ಷಗಳೇ ಕಳೆದಿವೆ. ಅದು ಆರಂಭಗೊಂಡ ದಿನಗಳಲ್ಲಿ ಒಂದಷ್ಟು ಸಂಘಟನೆಗಳು ಪ್ರತಿಭಟಿಸಿದ್ದೂ ನಿಜವೇ. ಆದರೆ ಈಗ ಅದನ್ನು ಮರೆಯುತ್ತ ಬಮ್ದು ಎಲ್ಲವೂ ತಣ್ಣಾಗಾಗುವ ಹೊತ್ತಿನಲ್ಲಿ ಸಮಯ ಸಾಧಿಸಿ, ಮೆಲ್ಲನೆ ಕಾಲಿಡಲಿದೆ ವಾಲ್ ಮಾರ್ಟ್. ಹಾಗೆ ಬರುವ ಮುನ್ನ ಸಾಕಷ್ಟು ಅಧ್ಯಯನ ನಡೆಸಿರುವ ಅದು ನಮ್ಮ ವೀಕ್ ನೆಸ್ಸುಗಳನ್ನು ಚೆನ್ನಾಗಿ ಅಭ್ಯಸಿಸಿಯೇ ಬರುತ್ತಿದೆ. ಅದಾ ಹೊರಗಿನವರಿಗೆ ಮಣೆ ಹಾಕುವ ನಮ್ಮ ಸರ್ಕಾರಗಳು ಅದಕ್ಕೆ ತಲೆಬಾಗಿ ಅದರ ಅಡಿಯಾಳಾಗುವ ದಿನವೇನೂ ದೂರವಿಲ್ಲ.

ಅಂದ ಹಾಗೆ… ಅವತ್ತೂ ಒಂದು ಈಸ್ಟ್ ಇಂಡಿಯಾ ಕಂಪೆನಿ ಬಂದಿತ್ತು, ವ್ಯಾಪಾರಕ್ಕೇಂತ. ಆಮೇಲೆ ಗೊತ್ತೇ ಆಗದ ಹಾಗೆ ನಾವು ನೂರಾರು ವರ್ಷ ಕಾಲ ಗುಲಾಮರಾಗಿಹೋದೆವು. ವಾಲ್ ಮಾರ್ಟ್ ಅದರದ್ದೇ ಸಂತಾನ. ವ್ಯಾಪಾರದ ನೆಪದಲ್ಲಿ ಅದು ನಮ್ಮನ್ನ ಕೊಳ್ಳುಬಾಕರನ್ನಾಗಿಸುತ್ತೆ. ನಾವೂ ಶಾಪಿಂಗಿಗೆ ಹೋಗೋದನ್ನ ಫ್ಯಾಶನ್ ಅಂದುಕೊಳ್ತೇವೆ. ಬೇಡದ್ದನ್ನು ಕೊಳ್ತೇವೆ. ಅದರ ಲಾಭ ಯಾರಿಗೋ ಸೇರಿಹೋಗತ್ತೆ! ಮತ್ತೆ ನಮ್ಮ ಜನರು ಬೀದಿ ಪಾಲಾಗುತ್ತಾರೆ. ನಾವು ಮೆಲ್ಲಗೆ ಮತ್ತೆ ದಾಸ್ಯದ ತೆಕ್ಕೆಗೆ ಸೇರಿಕೊಂಡುಬಿಡುತ್ತೇವೆ.

ಹಾಗಾದರೆ, ಇತಿಹಾಸ ನಮಗೇನೂ ಪಾಠ ಕಲಿಸಲೇ ಇಲ್ವೇ?

Comments Posted (0)