ಭಾನುವಾರದ ಸುಂದರ ಸಂಜೆ…

Posted by ಅರುಂಧತಿ | Posted in | Posted on 7:06 AM

ನಿಜಕ್ಕೂ ಫೆಬ್ರವರಿ ಹದಿನೇಳರ ಭಾನುವಾರದ ಸಂಜೆ ನನಗೆ ಅವಿಸ್ಮರಣೀಯವಾದ ಭಾವ ಜಾಗೃತಿಯ ಸಾರ್ಥಕ ಸಮಯವಾಗಿತ್ತು. ಅತ್ಯಂತ ಉಲ್ಲಾಸದಾಯಕವಾಗಿತ್ತು.
ಹೀಗೆ ನನ್ನನ್ನು ಆಳವಾಗಿ ತಟ್ಟಿದ ಕಾರ್ಯಕ್ರಮದ ಹೆಸರು- “ವಂದೇ ಮಾತರಂ ಗೀತ ಸಂಧ್ಯಾ”
ಮೈತ್ರಿ ಸಂಸ್ಕೃತಿ ಪ್ರತಿಷ್ಟಾನದ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ‘ಭಾರತ ವೈಭವ’ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು.

ವಂದೇ ಮಾತರಂ

‘ವಂದೇ ಮಾತರಂ…’ ಈ ಎರಡು ಪದಗಳು ಸಾಕು ಮಿಂಚಿನ ಸಂಚಾರಕ್ಕೆ. ಯಾವ ಎರಡು ಪದಗಳನ್ನು ಉಚ್ಚ ಕಂಠದಲ್ಲಿ ಮೊಳಗಿಸುತ್ತ ಸಾವಿರಾರು ರಾಷ್ಟ್ರ ಪ್ರೇಮಿಗಳು ಹುತಾತ್ಮರಾದರೋ, ಲಕ್ಶಾಂತರ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಪಣ ತೊಟ್ಟೂ ನಿಂತರೋ ಅಂತಹ ಪ್ರೇರ್‍ಅಕ ರಣ ಮಂತ್ರ ಅದು!

ಬಹುಶಃ ನಿಮಗೆ ‘ವಂದೇ ಮಾತರಂ’ ಹುಟ್ಟಿದ ಬಗೆ ಗೊತ್ತಿರಬಹುದು.
ಖ್ಯಾತ ಕವಿ ಶ್ರೀ ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೆಅವೇ ಚಿತ್ರಣಗಳು. ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!
ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು೮ ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣ ಮಂತ್ರವಾಗಿ ಹರಿಯಿತು.

೧೯೦೫ರಲ್ಲಿ ಆಂಗ್ಲರು ಕೇಕು ಕತ್ತರಿಸಿದ ಹಾಗೆ ಬಂಗಾಳವಿಭಜನೆ ಮಾಡಹೊರಟಿದ್ದರಲ್ಲ, ಆಗ ಅದರ ವಿರುದ್ಧ ಹಿಂದೂ ಮುಸ್ಲಿಮರೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಹೋರಾಟಕ್ಕೆ ಹಚ್ಚಿದ್ದು ಈ ‘ವಂದೇ ಮಾತರಂ’ ಘೋಷ. ಬಂಗಾಳ ವಿಭಜನೆಯ ಮೂಲಕ ಯಾರ ನಡುವೆ ಬಿರುಕು ಮೂಡಿಸಬೇಕೆಂದು ಅವರು ಅಲೋಚಿಸಿದ್ದರೋ ಅದೇ ಹಿಂದೂ ಮುಸ್ಲಿಮರು ಜಾತಿ ಭೇದ ಮರೆತು ವಂದೇ ಮಾತರಂ ಘೋಷಣೇಯಡಿಯಲ್ಲಿ ಒಟ್ಟಾದರು, ಆಂಗ್ಲರ ಕುತಂತ್ರಕ್ಕೆ ಮಾರುತ್ತರ ನೀಡಿದರು!

ಬಿಡಿ. ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಸ್ಫೂರ್ತಿ ವಾಕ್ಯವಾಗಿ ಹರಿದುಬಂದು ರಾಷ್ಟ್ರ ಗೀತೆಯಾಗಬೇಕಿದ್ದ ‘ವಂದೇ ಮಾತರಂ’ಆ ಸ್ಥಾನಕ್ಕೆ ಆಯ್ಕೆಯಾಗದೆಹೋಗಿದ್ದು, “ಅದು ಪಾಶ್ಚಾತ್ಯರ ಬ್ಯಾಂಡ್ ಸೆಟ್ಟಿಗೆ ಹೊಂದೋಲ್ಲ” ಅನ್ನುವ ಕಾರಣಕ್ಕೆ! ಈ ಬಾಲಿಶ, ಅಸಹ್ಯಕರ ಕಾರಣ ನೀಡಿದವರ್ಯಾರು ಗೊತ್ತಾ? ನಮ್ಮ ದೇಶದ ಮೊದಲ ಪ್ರಧಾನಿ ಜವಹರ ಲಾಲ ನೆಹರೂ!!

ಕ್ಷಮಿಸಿ. ಹೇಳಹೊರಟಿದ್ದು ವಂದೇ ಮಾತರಂ ‘ಕಾರ್ಯಕ್ರಮ’ದ ಬಗ್ಗೆ.ಏನು ಮಾಡಲಿ? ಆ ದಿವ್ಯ ಮಂತ್ರ ಸ್ಮರಣೆಗೆ ಬಂದಾಗಲೆಲ್ಲ ಈ ವಿವರಗಳು ಹಿಂಬಾಲಿಸಿ ಬಂದುಬಿಡುತ್ತವೆ.

ಗೀತ ಸಂಧ್ಯಾ

ಶಂಕರ ಶಾನುಭಾಗ್ ಉತ್ತಮ ಸಂಸ್ಕಾರ ಹೊಂದಿರುವ ಸಹೃದಯಿ ಸಂಗೀತ ಕಲಾವಿದರು. ಅವರ ಕಂಠವನ್ನ ‘ಕಂಚಿನ ಕಂಠ’ ಎಂದರೆ ಕ್ಲೀಷೆಯಲ್ಲ ಅನ್ನೋದು, ಅವರ ವಿಶಿಷ್ಟ ಶೈಲಿಯ ವಂದೇ ಮಾತರಂ ಗೀತೆಯ ಗಾಯನದಲ್ಲೇ ಗೊತ್ತಾಗಿಹೋಗುತ್ತದೆ.
ಭಾವಾವಿಶ್ಟರಾಗಿ ಶಾನುಭಾಗ್ ‘ಹೂ ಹರೆಯದ ಹೊಂಗನಸುಗಳೇ… ಏಳಿ ಏಳೀ ಏಳಿ ಎಚ್ಚರಾಗಿ ಕನಸುಕಂಗಳೇ’ ಹಾಡುವಾಗ ಶ್ರೋತೃಗಳ ಮುಖದಲ್ಲಿನ ಹುಮ್ಮಸ್ಸು ನೋದಬೇಕು ನೀವು!
ಶಂಕರರ ತಂಡದಲ್ಲಿನ ಪ್ರತಿಯೊಬ್ಬ ಗಾಯಕ- ಗಾಯಕಿಯೂ ಹೀಗೇ. ಮನದುಂಬಿ, ಅಂತರಾಳದಿಂದ ಹಾಡುತ್ತರೆ. ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡುವಾಗ ಅಕ್ಷರಶಃ ಕಣ್ಣೀರುಮಿಡಿಯುತ್ತಾರೆ.

ಭಾನುವಾರದ ಸಂಜೆಯ ಈ ಸುಂದರ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಶಣೆಯಾಗಿದ್ದವರು ದಿವಂಗತ ಕರ್ನಲ್ ವಸಂತರ ತಾಯಿ ಮತ್ತು ಪತ್ನಿ. ಜೊತೆಗೆ, ವಯೋವೃದ್ಧರಾದ ನಿವೃತ್ತ ಕರ್ನಲ್ ಶ್ರೀ ಕಾತ್ಕರ್ ಅವರು.

“ನೀವೆಲ್ಲ ನಿಮ್ಮ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತೀರಿ. ಅಲ್ಲಿ ನಿಮ್ಮದೇ ಕುಟುಂಬದ ರಕ್ಷಣೆಗಾಗಿ ಯೋಧರು ಜೀವದ ಹಂಗು ತೊರೆದು ನಿಂತಿದ್ದಾರೆ. ಸದಾ ಇದನ್ನು ನೆನಪಿಡಿ. ದಯವಿಟ್ಟು ಯೋಧ ಕುಟುಂಬಗಳೊಡನೆ ಸಹಕರಿಸಿ ಮಾನವೀಯತೆ ತೋರಿ” ಎಂದು ವಿನಂತಿಸುತ್ತ ನಮಗೆ ನಮ್ಮ ಕರ್ತವ್ಯದ ಪಾಠ ಹೇಳಿದವರು ದಿ. ಕರ್ನಲ್ ವಸಂತರ ಪತ್ನಿ.

ಇನ್ನು, ಕರ್ನಲ್ ಕಾಟ್ಕರ್…
ಅವರಂತೂ ಕಾರ್ಯಕ್ರಮದ ಭಾವುಕ ವಾತಾವರಣದಲ್ಲಿ ಸಂಪೂರ್ಣ ಅಮಿಮರೆತಿದ್ದರು.
ಎಂಭತ್ತು ಮೀರಿದ ಈ ವಯಸ್ಸಿನಲ್ಲೂ ಅವರ ಚೀನಾ ಯುದ್ಧದ ಪ್ರತಿ ಕ್ಷಣಗಳು ತಾಜಾ ಆಗಿವೆ. ಅವುಗಳಾಲ್ಲಿ ಕೆಲವನ್ನು ಅವರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಂಚಿಕೊಂಡರು.

ಕರ್ನಲ್ ಹೇಳಿದ ಒಂದು ಘಟನೆ…

“ಲಡಾಖ್ ನಲ್ಲಿ ಶೂನ್ಯಕ್ಕಿಂತ ಅತ್ಯಂತ ಕೆಳಗಿನ ಉಷ್ಣಾಂಶದಲ್ಲಿ ಮಂಜುಗಟ್ಟಿದ ವಾತಾವರಣಾಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆಯೂ ನಾವು ಚೀನೀಯರ ವಿರುದ್ಧ ಸೆಟೆದು ನಿಂತಿದ್ದೆವು. ನಮಮ್ ಪ್ಲಟೂನ್ ನಲ್ಲಿ ಪ್ರಮೋದ್ ಎನ್ನುವ ತೀರ ಚಿಕ್ಕ ವಯಸ್ಸಿನ ತರುಣ ಸೈನಿಕನಿದ್ದ. ಸದಾಚಟುವಟಿಕೆಯ ಆತ, ವಿಧವೆ ತಾಯಿಯ ಏಕಮಾತ್ರ ಮಗನಾಗಿದ್ದ.
ಅತ್ತ ನಾವು ಮರಗಟ್ಟಿಸುವ ಚಳಿಯಲ್ಲಿ ಹಗಲಿರುಳು ಬಂದೂಕು ಹಿಡಿದು ನಿಂತಿದ್ದಾಗ ಪ್ರಮೋದನ ತಾಯಿಯಿಂದ ಒಂದು ಪತ್ರ ಬಂದಿತು. ಪಾಪ, ಅವರು ಅದನ್ನು ಬರೆದು ಅದೆಷ್ಟು ದಿನವಗಿತ್ತೋ, ಹಿಮದ ಹಾದಿಯಲ್ಲಿ ನಡುಗುತ್ತ, ಕೊನೆಗೂ ಅದು ಅವನ ಕೈ ತಲುಪಿತ್ತು. ಆ ಹೊತ್ತಿಗಾಗಲೇ ಚೀನೀಯರು ನಮಗೆ ತೀರ ಹತ್ತಿರ ಬಂದುಬಿಟ್ಟಿದ್ದರು.
ಅಂತಹ ಉತ್ಕಟ ಕ್ಷಣದಲ್ಲಿ ಆ ತಾಯಿ ಬರೆದ ಸಾಲುಗಳು ಎಂಥವಿತ್ತು ಗೊತ್ತೇ?
“ಮಗೂ, ಚೀನೀಯರು ದೇಶದ ಗಡಿ ದಾಟಲಿದ್ದಾರೆಂದು ಸುದ್ದಿ ಇದೆ. ನೀನದಕ್ಕೆ ಬಿಡಕೂಡದು. ಹಾಗೇನಾದರೂ ಅವರು ದಾಟುವುದೇ ಆದರೆ, ಪ್ರಮೋದನ ಹೆಣದ ಮೇಲೆ ದಾಟಿಕೊಂಡು ಒಳಬರಬೇಕು!”
ನಮ್ಮ ಕೆಚ್ಚು ಹೆಚ್ಚಲಿಕ್ಕೆ ಇನ್ನೇನು ಬೇಕಿತ್ತು? ಕೂಡಲೆ ನಾವೆಲ್ಲ ಸೇರಿ ಆ ತಾಯಿಗೆ ಪತ್ರ ಬರೆದೆವು. “ಅಮ್ಮಾ, ಹಾಗೇನಾದರೂ ಚೀನೀಯರು ದೇಶದೊಳಕ್ಕೆ ನುಗ್ಗುವರೆನ್ನುವುದೇ ಆದರೆ, ಒಬ್ಬನಲ್ಲ, ಆರು ಪ್ರಮೋದರ ಹೆಣ ದಾಟಿ ಬರಬೇಕು. ಹೆದರಬೇಡ, ನಾವು ಜೀವದ ಹಂಗು ತೊರೆದು ಕಾದುತ್ತೇವೆ!”

~

ಹ್ಹ್! ನಮ್ಮ ನಮಮ್ ಕಲ್ಪನೆಯ ಸುಖದ ದ್ವೀಪಗಳಲ್ಲಿ ಬದುಕುತ್ತಿರುವ ನಮಗೆ, ದೇಶಕ್ಕಾಗಿ ಸಾಯೋದು ಅಂದರೇನು ಗೊತ್ತೇ?
ಬೇಡ. ದೇಶಕ್ಕಾಗಿ ಬದುಕಲಿಕ್ಕಾದರೂ….?

Comments Posted (0)