ಜರಾ ಯಾದ್ ಕರೋ ಕುರ್ಬಾನಿ….

Posted by ಅರುಂಧತಿ | Posted in | Posted on 7:06 AM

ಅದು ೧೯೩೧ನೆ ಇಸವಿ, ಮಾರ್ಚ್ ೨೩. ಲಾಹೋರಿನ ಸೆರೆಮನೆಯ ಮುಂದೆ ಸಾವಿರಾರು ಜನ ಸೇರಿದ್ದರು. ‘ವಂದೇ ಮಾತರಂ’ ಘೋಷಣೆ ಮುಗಿಲು ಮುಟ್ಟಿತ್ತು. ಆ ಜನ ಸಂದಣಿಯಲ್ಲಿ ಎಲ್ಲರಿಗಿಂತ ವೃದ್ಧ ತಾಯ್ತಂದೆಯರು ನಿಂತಿದ್ದರು. ಅವರ ಕಂಗಳಲ್ಲಿ ಮುಂದೇನಾಗುವುದೋ ಎಂಬ ಕಾತರತೆ. ಪಾಪಿ ಬ್ರಿಟಿಷರು ತಮ್ಮ ಮಕ್ಕಳನ್ನು ನಿರ್ದಯವಾಗಿ ಗಲ್ಲಿಗೇರಿಸುತ್ತಾರಲ್ಲ ಅನ್ನುವ ದುಗುಡ. ಆದರೂ ಕಣ್ಣಲ್ಲಿ ಹನಿ ನೀರಿಲ್ಲ! ಅಂಥ ಧೀರತನ.

ಹ್ಹ್! ಆ ಎದೆಗಾರಿಕೆ ಬ್ರಿಟಿಷರಿಗಿರಬೇಕಲ್ಲ? ಹೊರಗೆ ನೆರೆದ ಜನ ಸಂದಣಿಯನ್ನು ಕಂಡೇ ನಡುಗಿಹೋಗಿದ್ದರು. ಅವರೆಲ್ಲಿ ಸೆರೆಮನೆಯ ಗೋಡೆ ಒಡೆದು ಒಳನುಗ್ಗಿ, ಯುವ ಕ್ರಾಂತಿಕಾರಿಗಳನ್ನು ಬಿಡಿಸಿ ಕರೆದೊಯ್ಯುವರೋ ಎಂಬ ಅಂಜಿಕೆ ಅವರಿಗೆ. ಅದಕ್ಕಾಗಿಯೇ ಅವರು ನಿಗದಿತ ದಿನಕ್ಕಿಂತ ಒಂದು ದಿನ ಮೊದಲೇ ತಮ್ಮ ಅಪರಾಧಿಗಳನ್ನು ಗಲ್ಲಿಗೇರಿಸುವ ತಯಾರಿಯಲ್ಲಿದ್ದರು.

ಇಷ್ಟಕ್ಕೂ ಆ ಅಪರಾಧಿಗಳು ಮಾಡಿದ್ದ ಅಪರಾಧ ಯಾವುದು ಗೊತ್ತೇ? ದೇಶದ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದ್ದು. ಆ ದನಿ ಕಿವುಡು ಬ್ರಿಟಿಷ್ ಸತ್ತೆಗೆ ಕೇಳದಾದಾಗ ಬಾಂಬೆಸೆದು ಸದ್ದು ಮಾಡಿದ್ದರು ಅವರು!
ಅವರೇ ದೇಶದಲ್ಲಿ ಕ್ರಾಂತಿ ದೀಪ ಮತ್ತಷ್ಟು ಜ್ವಾಜಲ್ಯಮನವಾಗಿ ಬೆಳಗುವಂತೆ ಮಾಡಲು ತಮ್ಮ ರಕ್ತವನ್ನೇ ಬಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್!

bb.jpg

ಹಾಗೆ ಈ ಮೂವರು ಯುವ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಅವರು ಕೊಟ್ಟ ಕಾರಣ ‘ರಾಜ ದ್ರೋಹ’. ಈ ಬಿಸಿ ರಕ್ತದ ಯುವಕರು ಅನ್ಯಾಯ ದರ್ಪಗಳ ಮುದ್ದೆಯಂತಿದ್ದ ಸ್ಯಾಂಡರ್ಸ್ ನ ಹತ್ಯೆ ಮಾಡಿದ್ದರು. ಅಸಲಿಗೆ ಅವರ ಗುರಿಯಾಗಿದ್ದಿದ್ದು ಸ್ಕಾಟ್. ಈತ ಲಾಲಾಜಿಯವರ ಸಾವಿಗೆ ಕಾರಣನಾಗಿದ್ದ. ಅದರ ಸೇಡು ತೀರಿಸಿಕೊಳ್ಳಲೆಂದೇ ಈ ಕ್ರಾಂತಿಕಾರಿಗಳು ಸ್ಕಾಟ್ ಹತ್ಯೆಯ ಯೋಜನೆ ರೂಪಿಸಿದ್ದರು. ಅದರ ಬದಲಿಗೆ ಮತ್ತೊಬ್ಬ ದುರಹಂಕಾರಿಯ ಸಂಹಾರವಾಗಿತ್ತು.

ಭಗತ್ ಸಿಂಗನ ಕಥೆ ಕೊನೆಯ ಪಕ್ಷ ಆ ಸಿನೆಮಾ ನೋಡಿದ ಹಲವು ಯುವಕರಿಗಾದರೂ ಗೊತ್ತಿರುತ್ತದೆ. ಹೌದು. ನಮ್ಮ ಪಠ್ಯಗಳಲ್ಲಿ ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂಥ ನಮ್ಮ ಚರಿತ್ರೆಯನ್ನು ಹೇಳಿರುವುದು ಕದಿಮೆ. ಭಗತ್ ಸಿಂಗನದಾದರೂ ಕೊಂಚ ಕಂಡೀತೇನೋ, ರಾಜ ಗುರುವಿನಂಥ ಮರಾಠಾ ಕಲಿ, ಸುಖದೇವನಂತಹ ಸಮರ್ಪಣಾ ಭಾವದ ಕ್ರಾಂತಿವೀರರ ಬಗ್ಗೆ ಕೇಳುವುದೇ ಬೇಡ.

ಇರಲಿ. ಈ ಭಗತ್ ಸಿಂಗ್, ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕೆಚ್ಚು ಬೆಳೆಸಿಕೊಂಡಿದ್ದು ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ದುರಂತದಿಂದ. ನಂತರ, ಗಾಂಧೀಜಿಯವರ ಅಸಹಕಾರ ಚಳುವಳಿ ಆತನ ಹೋರಾಟಕ್ಕೊಂದು ಮಾರ್ಗ ಹಾಕಿಕೊಟ್ಟಿತು. ಆದರೆ ಚೌರಿಚೌರಾದ ಘಟನೆಗೆ ಪ್ರತಿಕ್ರಿಯೆಯಾಗಿ ಗಾಂಧೀಜಿ ಚಳುವಳಿಯನ್ನು ಹಿಂಪಡೆದರು. ಇದರಿಂದ, ಶಾಲೆ ಬಿಟ್ಟು ಚಳುವಳಿಗೆ ಧುಮುಕಿದ್ದ ಭಗತನಿಗೆ ನಿರಾಸೆಯಾಯ್ತು. ಮುಂದೆ ಲಾಹೋರಿನ ನ್ಯಾಶನಲ್ ಕಾಲೇಜಿನಲ್ಲಿ ಓದು ಮುಂದುವರೆಸಿದ.
ಕಾಲೇಜಿನ ದಿನಗಳಲ್ಲಿ ಸುಕದೇವನ ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತಿದ್ದ ಭಗತ್, ಕ್ರಮೇಣ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಪಡೆದ. ಪಂಡಿತ್ ಜೀ ಎಂದೇ ಖ್ಯಾತರಾಗಿದ್ದ ಚಂದ್ರ ಶೇಖರ ಆಜಾದರ ಸಹವಾಸಕ್ಕೆ ಬಂದಮೇಲಂತೂ ಅವನ ಕ್ರಾಂತಿ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡವು. ಹಿರಿಯ ಕ್ರಾಂತಿಕಾರಿಗಳೊಡಗೂಡಿ ಕಾಕೋರಿ ಲೂಟಿಯಲ್ಲಿ ಪಾಲ್ಗೊಂಡ.

ಮುಂದೆ ಜೈಲಿನಲ್ಲಿ ಕೂಡ ಭಗತ್ ಸಿಂಗ್ ತನ್ನ ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆಯನ್ನು ಮೆರೆದ. ನಲವತ್ತು ದಿನಗಳ ಕಾಲ ಸಂಗಡಿಗರೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶ ಬಾಂಧವರಿಗೆ ಕ್ರಾಂತಿಕಾರಿಗಳ ಹೋರಾಟದ ಬಗ್ಗೆ ಇದ್ದ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದ. ಆತ ಪ್ರತಿಪಾದಿಸಿದ ‘ಪೂರ್ಣ ಸ್ವರಾಜ್ಯ’ ಚಿಂತನೆಯು ಕಾಂಗ್ರೆಸ್ಸಿನ ತರುಣರನ್ನು ಸೆಳೆಯಿತು. ಆವರೆಗೂ ಡೊಮಿನಿಯನ್ ಸ್ಟೇಟಸ್ ಬಗ್ಗೆ ಮಾತಾಡುತ್ತಿದ್ದ ಕಾಂಗ್ರೆಸ್, ತಾನೂ ಪೂರ್ಣ ಸ್ವರಾಜ್ಯದ ಬಗ್ಗೆ ಘೋಷಣೆ ನೀಡಲಾರಂಭಿಸಿತು.

ಇನ್ನೂ ಮೂವತ್ತು ಮುಟ್ಟಿರದ ಮೂರು ರತ್ನಗಳು ಜಯಗೋಪಾಲ ಎನ್ನುವ ದ್ರೋಹಿಯ ಕಾರಣದಿಂದ ದೇಶಭಕ್ತಿಗೆ ಶಿಕ್ಷೆ ಅನುಭವಿಸಬೇಕಾಗಿ ಬಂದಿದ್ದು ನಮ್ಮ ಪಾಲಿನ ದುರಂತ. ಈ ಬಗೆಯ ದ್ರೋಹಿಗಳೇನು ಬಿಡಿ, ಸಿರಾಜುದ್ದೌಲನನ್ನು ನಂಬಿಸಿ ಕೇಡು ಬಗೆದ ಮೀರ್ ಜಾಫರನಿಂದ ಹಿಡಿದು, ಚಾಫೇಕರ್ ಸಹೋದರರ ನೇಣಿಗೆ ಕಾರಣನಾದ ದ್ರವಿಡನವರೆಗೂ ಇದ್ದೇ ಇದ್ದರು. ಯಾಕೆ? ಅಲೆಕ್ಸಾಂಡರನು ಭಾರತಕ್ಕೆ ಬಂದ ಕಾಲದಲ್ಲೇ ಪೌರವನಿಗೆ ದ್ರೋಹ ಬಗೆದ ಅಂಬಿಯೇ ಇರಲಿಲ್ಲವೇ? ನಮ್ಮ ಚೆನ್ನಮ್ಮ ಕೂಡ ಸೆರೆ ಸಿಕ್ಕಿದ್ದು ದ್ರೋಹಿಗಳ ಕಾರಣದಿಂದಲೇ. ಇಲ್ಲವಾದಲ್ಲಿ ನಮ್ಮ ಹೆಮ್ಮೆಯ ನಾಡಿನ ಕದನ ಕಲಿಗಳನ್ನು ಬಂದೂಕಿನ ತುದಿಯಿಂದ ಹೆದರಿಸಿ ಸೆರೆ ಹಿಡಿಯುವಷ್ಟು ತಾಖತ್ತು ಪರದೇಶೀಯರಿಗೆಲ್ಲಿಂದ ಬರಬೇಕು!?

ಇರಲಿ. ಅಂತೂ ನಮ್ಮ ಕ್ರಾಂತಿರತ್ನಗಳು ನಗುನಗುತ್ತ ಕುಣಿಕೆ ಚುಂಬಿಸಿ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಿಸುತ್ತ ಆತ್ಮಾಹುತಿಗೆ ಅಣಿಯಾದರು. ಕಟುಕನ ಕಾಯಕದ ಜೈಲರ್ ಕೂಡ ಇವರ ಕೆಚ್ಚು ಕಂಡು ಕಣ್ಣೀರ್ಗರೆದ. ಅಂತೂ ಇಂತೂ ಮಾರ್ಚ್ ೨೩ರ ಆ ದಿನ ಭಗತ್, ರಾಜ ಗುರು, ಸುಖದೇವರು ತಾಯಿ ಭಾರತಿಗಾಗಿ ತಮ್ಮ ಜೀವವನ್ನು ಧಾರೆ ಎರೆದರು. ಭಗತನಂತೂ ಆಜಾದರು ತಪ್ಪಿಸಿಕೊಳ್ಳುವ ಉಪಾಯ ಸೂಚಿಸಿದ್ದಾಗ ‘ನಾನು ಇದ್ದು ಮಾದುವುದಕ್ಕಿಂತ ಸತ್ತು ಇನ್ನೂ ಹೆಚ್ಚಿನದನ್ನು ಸಾಧಿಸಬಲ್ಲೆ’ ಎಂದು ದೃಢವಾಗಿ ನುಡಿದಿದ್ದ. ಅದರಂತೆ, ಲಕ್ಷಲಕ್ಷ ಭಾರತೀಯರು ದೇಶಕ್ಕಾಗಿ ಸಾಯುವ ಪಾಠವನ್ನು ಈ ನಗುಮೊಗದ ತರುಣರಿಂದ ಕಲಿತುಕೊಂಡರು. ಜೀವದ, ಸುರಕ್ಷತೆಯ, ಸ್ವಾರ್ಥದ ಹಂಗು ತೊರೆದು ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ಮುಂದಡಿಯಿಟ್ಟರು.
ಯುವಕರಲ್ಲಿ ಮೂಡಿದ ಈ ‘ಸಾಯುವ’ ಕೆಚ್ಚು ಮುಂದೆ ಸುಭಾಷರ ಆಜಾದ್ ಹಿಂದ್ ಫೌಜಿಗೆ ಸಾಕಷ್ಟು ಬಲ ತಂದಿತು.

ಅಹಿಂಸಾಚಳುವಳಿಗೆ ಪೂರಕವಾಗಿ ನಡೆದ ಕ್ರಾಂತಿ ಚಳುವಳಿ, ನೇತಾಜಿಯ ಸೇನಾಬಲ ಮತ್ತು ಬ್ರಿಟಿಷರ ಕೆಳಗಿದ್ದ ಭಾರತೀಯ ಸೈನಿಕರು ನೇತಾಜಿಯವರತ್ತ ಬೆಳೆಸಿಕೊಳ್ಳತೊಡಗಿದ ಒಲವು, ಬ್ರಿಟಿಷರನ್ನು ಹೆದರಿಸಿತು. ಪಾಪ! ಅವರಿಗೆ ೧೮೫೭ರ ನೆನಪಾಗಿರಲೂ ಸಾಕು!! ಅಂತೂ ನಮಗೆ ಸ್ವಾತಂತ್ರ್ಯ ದಕ್ಕಿತು.

ಭಗತ್ ಸಿಂಗನಿಗೆ ಸ್ವಾತಂತ್ರ್ಯ ಪ್ರಾಪ್ತಿಯೊಂದೇ ಮುಖ್ಯವಾಗಿರಲಿಲ್ಲ. ಸ್ವಾತಂತ್ರ್ಯಾನಂತರದ ಭಾರತ ಹೇಗಿರಬೇಕೆನ್ನುವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಗಳಿದ್ದವು. ಆದರೆ ಅವೆಲ್ಲವೂ ಆತನೊಂದಿಗೇ ಮಣ್ಣುಗೂಡಿ ಹೋದವು.

ಅಳಿದರೇನು ದೇಹವಂದು
ಧ್ಯೇಯ ದೀಪ ಉರಿದಿದೆ
ನವ ಜನಾಂಗ ನೆಗೆದು ಬಂದು
ತೈಲವದಕೆ ಸುರಿದಿದೆ

- ಎಂದಿದೆ ಕವಿವಾಣಿ. ಆದರೆ ನಮ್ಮ ಯುವ ಪೀಳಿಗೆ ಅಂಥ ಯಾವ ಧ್ಯೇಯವನ್ನೂ ಕಾಯ್ದುಕೊಳ್ಳಲು ಮನಸ್ಸು ಮಾಡುತ್ತಿಲ್ಲ ಅನ್ನುವುದೇ ದುರಂತ.
ಈಗಲೂ ಕಾಲ ಮಿಂಚಿಲ್ಲ. ಮಾರ್ಚ್ ೨೩ರ ಶಹೀದ್ ದಿನದಂದು ನಾವೆಲ್ಲರೂ ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರಲ್ಲಿ ಅವರ ಹೋರಾಟವನ್ನು ಸಾರ್ಥಕಗೊಳಿಸುವ, ದೇಶದ ಸ್ವಾಭಿಮಾನ- ಸ್ವಾವಲಂಬಿತೆಗಳನ್ನು ಕಾಯ್ದಿಡುವ ದೀಕ್ಷೆ ತೊಡೋಣ. ಅವರ ಬಲಿದಾನವನ್ನು ಗೌರವಿಸೋಣ. ಆಗದೇ?

Comments Posted (0)