ಕೇಂದ್ರದ ಶಿಬಿರದಲ್ಲಿ ಲೆಫ್ಟಿನೆಂಟ್ ಕರ್ನಲ್ ಹರದೇವ ಕಾಟ್ಕರ್

Posted by ಅರುಂಧತಿ | Posted in | Posted on 1:10 AM

ಅವರು ಹುಟ್ಟಿದ ಸಂದರ್ಭದಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದರು. ಅವರಪ್ಪ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದವರು. ಮನೆ ಇದ್ದುದು ರಾಮನಗರದಲ್ಲಿ. ಮಳೆ- ನೆರೆಯ ಕಾರಣದಿಂದ ಗಾಂಧೀಜಿ ಅಲ್ಲೇ ಒಂದು ರಾತ್ರಿಯ ಮಟ್ಟಿಗೆ ತಂಗಬೇಕಾಗಿ ಬಂತು. ಆಗ ಆ ಶಿಶುವಿನ ತಂದೆಗೆ ಗಾಂಧೀಜಿಯವರೊಡನಾಡುವ ಸೌಭಾಗ್ಯ!
ಮಾರನೇ ಬೆಳಗ್ಗೆ ಹೀಗಾಯ್ತು. ರಾಷ್ಟ್ರಪಿತ ಸ್ನಾನಕ್ಕೆಂದು ಹೊಳೆಯತ್ತ ನಡೆದರು. ತಮ್ಮ ಬಟ್ಟೆ (ಬಟ್ಟೆ ಏನು? ತುಂಡು ಪಂಚೆ!) ತಾವೆ ಒಗೆದುಕೊಂದರು. ಈ ತಂದೆ ಆ ಬಟ್ಟೆಯನ್ನು ತಾವೇ ಹಿಡಿದುಕೊಂಡರು. ಮುಂದೆ ಮುಂದೆ ಗಾಂಧೀ, ಹಿಂದೆಹಿಂದೆ ಈತ. ನಡುವೆಯೆಲ್ಲೋ ಕೆಲ ನಿಮಿಷ ಅವರ ಪತ್ತೆಯಿಲ್ಲ. ಎಲ್ಲಿ ಹೋಗಿದ್ದರು!?

ಅವತ್ತಿನ ಸಂಜೆ ಲೋಕಾಭಿರಾಮದಲ್ಲಿ ಮಹಾತ್ಮಾ ಆತನನ್ನು ಕೇಳಿದರು, “ಬೆಳಗ್ಗೆ ನದಿಯಿಂದ ಬರುವಾಗ ನೀವು ಎಲ್ಲಿ ಮಾಯವಾಗಿಬಿಟ್ಟಿದ್ದಿರಿ!?
ಆತ ಸಂಕೋಚದಿಂದ ನುಡಿದರು. “ನನಗೆ ಕಳೆದ ವಾರವಷ್ಟೇ ಗಂಡು ಮಗು ಹುಟ್ಟಿದೆ. ನಿಮ್ಮ ಬಟ್ಟೆಯಿಂದ ಜಿನುಗುತ್ತಿದ್ದ ಪವಿತ್ರ ಜಲವನ್ನ ಅವನಿಗೆ ಚಿಮುಕಿಸಿ ಪವಿತ್ರಗೊಳಿಸೋಣವೆಂದು ಮನೆಗೆ ಹೋಗಿದ್ದೆ. ಹೆಂದತಿ ಮಗುವಿಗೆ ನೀರು ಸೋಕಿ ಶೀತವಾಗುತ್ತದೆಂದು ಗೊಣಗಿದಳು. ಆದರೆ ನಿಮ್ಮ ಮೈ ಸೋಕಿದ ಬಟ್ಟೆಯ ನೀರು ನನಗೆ ಪರಮ ಪವಿತ್ರ!”

ಗಾಂಧೀಜಿ ಅವರ ಅಭಿಮಾನಕ್ಕೆ ಸೋತರು. ಆದರೂ, ತಮ್ಮಿಂದಾಗಿ ಆ ಮಗುವಿಗೇನಾದರೂ ಶೀತಬಾಧೆಯಾದರೆ ತಮಗೆ ಪಾಪ ತಟ್ಟುತ್ತದಲ್ಲವೇ? ಎಂದು ಅವರನ್ನು ಪ್ರಶ್ನಿಸಿದರು. ಕೊನೆಗೆ ತಾವೇ ನೂತ ನೂಲಿನಿಂದ ಮಾಡಿದ ಕೆಲವು ಬಟ್ಟೆಚೂರುಗಳನ್ನು ಅವರ ಕೈಲಿಟ್ಟು ಹರಸಿದರು.

ಆ ಶಿಶು ಮುಂದೊಮ್ಮೆ ತನ್ನ ರಾಷ್ಟ್ರಕ್ಕಾಗಿ ಜೀವ ಪಣಕ್ಕಿಟ್ಟು ಹೋರಾಡುವುದಿತ್ತು. ಅದರ ಮುನ್ಸೂಚನೆಯೋ ಎನ್ನುವಂತೆ ರಾಷ್ಟ್ರಪಿತನ ಆಶೀರ್ವಾದ ಅದಕ್ಕೆ ದಕ್ಕಿತ್ತು. ಸ್ವಾಭೀಮಾನ, ದೇಶಾಭಿಮಾನಗಳನ್ನು ಮೈಮನಗಳ ತುಂಬ ಹೊತ್ತಿದ್ದ ಅದು ಮುಂದೆ ದೇಶ ಕಾಯುವ ಸೈನಿಕನಾಗಿ ರೂಪುಗೊಂಡಿತು…

~
ಹೌದು. ಇದು ಸತ್ಯ ಸಂಗತಿ. ಇಂಥ ಘಟನೆಗಳು ಅದೆಷ್ಟೋ ಇವೆ ನಿಜ. ಪ್ರಸ್ತುತ ಇಲ್ಲಿ ಹೇಳಿದ ಸಂಗತಿಯನ್ನ ನೇರಾನೇರ ಪ್ರಮುಖ ಪಾತ್ರಧಾರಿಯ ಬಾಯಿಂದಲೇ ಕೇಳುವಾಗ ಆಗಿದ್ದ ರೋಮಾಂಚನವಿದೆಯಲ್ಲ, ಅದು ನಮಗೆ ವಿಶಿಷ್ಟ ಅನುಭವ ನೀಡಿತು.
ಅವರು, ಲೆಫ್ಟಿನೆಂಟ್ ಕರ್ನಲ್ ಹರದೇವ್ ಕಾಟ್ಕರ್. ಅವರೇ ಗಾಂಧೀಜಿಯವರಿಂದ ಸ್ವಾಭಿಮಾನದ ಪ್ರತೀಕವಾದ ಖಾದಿ ಬಟ್ಟೆಯ ಉಡುಗೊರೆ ಪಡೆದ ಧನ್ಯ ಶಿಶು. ಸೈನಿಕ ವೃತ್ತಿಯ ಹಿನ್ನೆಲೆಯ ವಂಶಸ್ಥರಾಗಿದ್ದ ಅವರಿಗೆ ಅದೇನೂ ಯಾಂತ್ರಿಕ ದುಡಿಮೆಯಾಗಿರಲಿಲ್ಲ. ಅವರು ಸಂಪೂರ್ಣವಾಗಿ ತಮ್ಮನ್ನು ಮಾತೃಭೂಮಿಗೆ ಸಮರ್ಪಿಸಿಕೊಂಡಿದ್ದರು. ಭಾರತದ ಮೇಲಿನ ಅವರ ಅಭಿಮಾನ ಅವರ ಪ್ರತಿ ಮಾತಿನಲ್ಲೂ ಎದ್ದು ತೋರುತ್ತದೆ. ಎಂಭತ್ತೊಂದರ ಈ ಇಳಿ ವಯಸ್ಸಿನಲ್ಲೂ ಅವರು ಭಾರತದ ಬಗ್ಗೆ, ಯುದ್ಧಗಳ ಬಗ್ಗೆ ಗಂಟೆಗಟ್ಟಲೆ ಹರಟಬಲ್ಲರು. ಆದರೆ ಕೇಳುವ ನಾವು ಸೂಕ್ತ ಪ್ರಶ್ನೆಗಳನ್ನು ತಯಾರಿಟ್ಟುಕೊಂಡಿರಬೇಕಷ್ಟೆ.

ಹರದೇವ್ ಕಾಟ್ಕರ್ ಅವರು ಚೀನಾ ಯುದ್ಧದಲ್ಲಿ ಒಂದಿಡೀ ಪ್ಲಟೂನ್ ಅನ್ನು ಸಮರ್ಥವಾಗಿ ಮುನ್ನಡೆಸಿದ ನಮ್ಮ ಹೆಮ್ಮೆಯ ಕನ್ನಡಿಗ. ಯುದ್ಧದ ಅವರ ಒಂದೊಂದು ಅನುಭವವೂ ರೋಮಾಂಚಕಾರಿ. ತಮ್ಮ ಅಂದಿನ ದಿನಗಳ ಸಾಥಿಗಳನ್ನು ಅವರು ಇಂದಿಗೂ ಮರೆತಿಲ್ಲ. ಯುದ್ಧದಲ್ಲಿ ಹೊಟ್ಟೆಗೆ ಗುಂಡುಹೊಕ್ಕು ಕರುಳು ಸುಟ್ಟು ಹೋಗಿ ಡಾಕ್ಟರು ಅವರು ಬದುಕುವುದಿಲ್ಲವೆಂದುಬಿಟ್ಟಿದ್ದರಂತೆ! ಅವರು ಹಾಗೆ ಹೇಳಿ ಮೂವತ್ತೈದು ವರ್ಷಗಳು ಸಂದಿವೆ!! ನಮ್ಮ ವೀರಯೋಧ ವಯಸ್ಸಿನ ಕೆಲವು ಸೈಡ್ ಎಫೆಕ್ಟ್ ಗಳನ್ನು ಬಿಟ್ಟರೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ಅವರ ಹೊಟ್ಟೆಯ ಅರ್ಧ ಭಾಗ ಬರೀ ಕೃತಕ ಅಂಗಾಂಗಗಳಿಂದಲೇ ಕೂಡಿದೆ. ಆದರೂ ಅವರು ಯಾಅ ಕಾಯಿಲೆಯ ನೆಪ ಹೇಳದೆ ಇಂದಿಗೂ ತಮ್ಮ ಶಿಸ್ತಿನ ಜೀವನಕ್ಕೆ ಬದ್ಧರಾಗಿದ್ದಾರೆ.

ಕಾಟ್ಕರ್ ಅವರನ್ನು ನಾವು ಭೇಟಿಯಾಗಿದ್ದು- ಮೊನ್ನೆ ನಡೆಯಿತಲ್ಲ, ರ್‍ಆ.ಶ.ಕೇಂದ್ರದ ಯುವ ಜಾಗೃತಿ ಶಿಬಿರ… ಆ ಸಂದರ್ಭದಲ್ಲಿ. ಶಿಬಿರದ ಮುಖ್ಯ ಅಂಗವಾಗಿ ‘ಸೈನಿಕನೊಡನೆ ಒಂದು ಗಂಟೆ’ ಸಂವಾದ ಏರ್ಪಡಿಸಲಾಗಿತ್ತು. ಯುವಕರನ್ನು ಕಂಡು ಸಂತೋಷದಿಂದ ಉಬ್ಬಿಹೋದ ಕಾಟ್ಕರ್, ತಮ್ಮ ಉಸಿರಾಟದ ತೊಂದರೆಯನ್ನೂ ಮರೆತು ಎಡೆಬಿಡದೆ ಸುರಿಯುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಕುಳಿತಿದ್ದರು. ಯುವಕರೂ ಕೂಡ ಕಾಲದ ಅರಿವಿಲ್ಲದೆ, ಹೊಟೆ ಹಸಿವನ್ನೂ ಮರೆತು ಅವರೊಂದಿಗೆ ಮಾತುಕಥೆಯಲ್ಲಿ ಲೀನವಾಗಿ ಹೋಗಿದ್ದರು. ಮುಂದಿನ ಅವಧಿಯಲ್ಲಿ ಗಣೇಶ್ ದೇಸಾಯಿಯವರ ರಾಷ್ಟ್ರಭಕ್ತಿ ಗೀತ ಕಾರ್ಯಕ್ರಮವಿಲ್ಲದಿದ್ದರೆ ಬಹುಶಃ ಈ ಸಂವಾದವನ್ನು ಮಧ್ಯೆ ತುಂಡರಿಸುತ್ತಿರಲಿಲ್ಲವೇನೋ!?
ಯುವಕರಿಗಿರಲಿ, ಸ್ವತಃ ಕಾಟ್ಕರರಿಗೂ ಸಂವಾದ ಮುಗಿದದ್ದು ಬೇಸರವಾದಂತೆ ತೋರುತ್ತಿತ್ತು. ಅವರು ಇನ್ನಷ್ಟು, ಮತ್ತಷ್ಟು ಹೇಳುವ ಹುರುಪಿನಲ್ಲಿದ್ದರು. “ಛೆ! ನನ್ನ ಯೂನಿಫಾರಮ್ಮು, ಮೆಡಲುಗಳನ್ನು ನಿಮಗೆ ತೋರಿಸಲು ತರಬೇಕಿತ್ತು, ಇಷ್ಟು ಆಸಕ್ತ ಹುಡುಗರಿದ್ದೀರೆಂಬ ಕಲ್ಪನೆಯೂ ನನಗಿರಲಿಲ್ಲ!” ಎಂದು ಮತ್ತೆಮತ್ತೆ ಪೇಚಾಡಿಕೊಂಡರು.

ಶ್ರೀಯುತ ಕಾಟ್ಕರರು ಬರಹಗಾರರೂ ಹೌದು. ಇವರು ಬರೆದಿರುವ ‘ವಿಶ್ವ ಭರತಿ’ ಕೃತಿ ಇನ್ನೂ ಮುದ್ರಣ ಕಾಣಬೇಕಿದೆ. ಆರಂಭದಲ್ಲಿ ಇವರು ಶಿಕ್ಷಕ ವೃತ್ತಿಯನ್ನಾಯ್ದುಕೊಂಡಿದ್ದರು. ಆಗ ಶ್ರೀ ಪು ತಿ ನರಸಿಂಹಾಚಾರ್ ಇವರ ಸಹೋದ್ಯೋಗಿಯಾಗಿದ್ದರಂತೆ. ಆತ್ಮೀಯರೂ ಆಗಿದ್ದರಂತೆ. ಆಗಿಂದಲೂ ಇವರಿಗೆ ಸಾಹಿತ್ಯದತ್ತ ಒಲವು.
ಕವಿಯೂ ಆಗಿರುವ ಕಾಟ್ಕರರಿಗೆ ಗೀತೆ ರಚಿಸುವ, ಸಂಗೀತ ಸಂಯೋಜನೆ ಮಾಡುವ ಹವ್ಯಾಸಗಳೂ ಇದ್ದವಂತೆ. ಆದರೆ ತಾನೇನಾದರೂ ಸೇನೆಗೆ ಸೇರದೆ ಶಿಕ್ಷಕನಾಗಿಯೇ ಇದ್ದಿದ್ದರೆ ಮನಸ್ಸಿಗೆ ಖಂಡಿತ ನೆಮ್ಮದಿ- ಸಮಾಧಾನ ಸಿಗುತ್ತಿರಲಿಲ್ಲವೆನ್ನುತ್ತಾರೆ ಅವರು. ಸೇನೆಯ ಬಗ್ಗೆ ಅವರಿಗೆ ಅಂತಹ ಒಲವು!

ಕಾಟ್ಕರ್, ಸ್ವತಂತ್ರ್ಯಪೂರ್ವದಿಂದಲೂ ಸೇನೆಯಲ್ಲಿದ್ದವರು. ಹಾಗೆ ಆಂಗ್ಲರ ಅಧೀನರಾಗಿದ್ದ ಕಾಲದ ಒಂದು ಕಹಿ ಘಟನೆಯನ್ನು ಅವರು ನೆನೆಸಿಕೊಂಡರು.
ಅದೊಂದು ದಿನ ಕಾಟ್ಕರ್ ಕಂಟೋನ್ಮೆಂಟಿಗೆ ಹೋಗುತ್ತಾರೆ. ಅಲ್ಲಿ ವರಿಗೊಂದು ಮಿಲಿಟರಿ ಟೊಪ್ಪಿ ಕೊಳ್ಳುವುದಿರುತ್ತದೆ. ಅಲ್ಲೊಂದು ಟೊಪ್ಪಿ ಆಯ್ದು, ಅದಕ್ಕಾಗಿ ಅವರು ಎಂಟಾಣೆಯನ್ನೂ (ಅದರ ಬೆಲೆ) ಕೊಟ್ಟು ಕಾಯುತ್ತ ನಿಲ್ಲುತ್ತಾರೆ…. ಆದರೆ, ಅಲ್ಲೊಂದು ನಿಯಮವಿರುತ್ತದೆ. ಸಂಜೆ ಆರರ ನಂತರ ಭಾರತೀಯರು ಯಾರೂ ಕಂಟೋನ್ಮೆಂಟಿಗೆ ಕಾಲಿಡುವಂತಿಲ್ಲ!
ಇತ್ತ ಸಮಯ ಜಾರುತ್ತಿದೆ… ಆರು ಗಂಟೆಗೆ ಇನ್ನೊಂದೇ ಒಂದು ನಿಮಿಷ ಬಾಕಿ… ಬಿಲ್ ಬರೆಯುತ್ತಿದ್ದ ಬಿಳಿಯ ಬೇಕಂತಲೇ ತಡ ಮಾಡುತ್ತಿದ್ದಾನೆ… ಕಾಟ್ಕರರಿಗೆ ತಳಮಳ. ತಾವಿರುವ ಸ್ಥಳದಿಂದ ಕಂಟೋನ್ಮೆಂಟಿಗೆ ಬರಲು ಮತ್ತೆ ಖರ್ಚು ಮಾಡಬೇಕು, ಸಮಯವೂ ಹಾಳು.
ಅಗೋ! ಆರು ಗಂಟೆ ಬಡಿದೇಬಿಡುತ್ತದೆ. ಕಾಟ್ಕರ್ ಅದೆಷ್ಟು ಕೇಳಿಕೊಂಡರೂ ಬಿಳಿಯರು ಅವರನ್ನು ಅಲ್ಲಿರಗೊಡುವುದಿಲ್ಲ. ಯುವಕ ಕಾಟ್ಕರ್, ಅವಮಾನದಿಂದ ತಲೆ ತಗ್ಗಿಸಿಕೊಂಡು ಹೊರಬರುತ್ತಾರೆ…

~
ಕಾಟ್ಕರ್ ಪರಾಧೀನತೆಯ ತಮ್ಮ ಅನುಭವ ಸಂಕಟಗಳನ್ನು ವಿವರಿಸುತ್ತಿದ್ದರೆ, ಇತ್ತ ಕೇಳುತ್ತ ಕುಳಿತಿದ್ದ ಹುಡುಗರು, ತಾವು ಮತ್ತೆಂದೂ ಅಂತಹ ಸ್ಥಿತಿಗೆ ಜಾರದಿರುವಂತಾಗಬೇಕು, ಅದಕ್ಕೆ ನಾವು ಎಚ್ಚರದಿಂದಿರಬೇಕು ಎಂದು ಪಣ ತೊಡುತ್ತಿದ್ದರು.

ಶಿಬಿರದ ದಿನ ಆರತಿ ಅಕ್ಕ, ಮಹಮದ್ ಅನ್ವರ್, ಚಕ್ರವರ್ತಿ ಅವರ ಅವಧಿಗಳೂ ಇದ್ದವು. ಆ ಬಗ್ಗೆ ಮತ್ತೆ ಬರೆಯುವೆ. ಕೊನೆಯಲ್ಲಿ ಗಣೇಶ್ ದೇಸಾಯಿ ಅವರ ಗೀತಗಾಯನವಂತೂ ನಮ್ಮನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತ್ತು. ಖುದ್ದು ಅವರಿಗೂ ತಾವು ಹಾಡಿದ್ದು ಸಾಲಲಿಲ್ಲ ಅನ್ನುವಷ್ಟರ ಮಟ್ಟಿಗೆ ಎಲ್ಲರೂ ಅದರಲ್ಲಿ ಲೀನವಾಗಿದ್ದರು!

ರಾಷ್ಟ್ರ ಶಕ್ತಿ ಕೇಂದ್ರದ ಮೂಲ ಉದ್ದೇಶ ಇಂದಿನ ಪೀಳಿಗೆಯನ್ನು ಒಳಗಿನಿಂದಲೂ ಗಟ್ಟಿಗೊಳಿಸುವುದು. ಸದೃಢ- ಸ್ವಾಭಿಮಾನೀ ಯುವ ಪಡೆಯನ್ನು ಸಜ್ಜುಗೊಳಿಸುವುದು.

Comments Posted (0)