ರಾಮ ನಂಬಿಕೆ ಇರಬಹುದು… ಥೋರಿಯಮ್ ನಿಕ್ಷೇಪ ಮಾತ್ರ ವಾಸ್ತವವೇ ಹೌದು

Posted by ಅರುಂಧತಿ | Posted in | Posted on 7:10 AM

ಭಾರತ ಭಾವನೆಗಳ ನಾಡು. ಅದರಲ್ಲಿ ಎರಡು ಮಾತಿಲ್ಲ. ಇಲ್ಲಿ ಭಾವನೆಗಳಿಲ್ಲದೆ ಯಾವ ಕೆಲಸವೂ ನಡೆಯಲಾರದು. ಪ್ರತಿಯೊಂದು ಘಟನೆಯನ್ನು ಶುಷ್ಕವಾಗಿ ಓದದೇ ಅದನ್ನು ಬದುಕಿಗೆ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸುವುದರಿಂದಲೇ ಇಲ್ಲಿನ ಜನರಿಗೆ ರಾಮಾಯಣ, ಮಹಾಭಾರತಗಳು ಚಿರಪರಿಚಿತ. ಉದಾಹರಣೆಗೆಂದೇ ಇಟ್ಟುಕೊಳ್ಳಿ, ನಮ್ಮಲ್ಲಿ ಯಾರಾದರೂ ಮಿತಿಮೀರಿ ನಡೆದರೆ, ನಿಯಮಗಳನ್ನ ಉಲ್ಲಂಘಿಸಿದರೆ, “ಲಕ್ಷ್ಮಣ ರೇಖೆ ದಾಟಿದರೆ ಆಗೋ ಅನಾಹುತ ಗೊತ್ತಲ್ಲಾ?” ಅನ್ನುತ್ತಾರೆ. ಆ ಕ್ಷಣಕ್ಕೆ ರೇಖೆ ಹಾಕಿದ ಲಕ್ಷ್ಮಣ, ದಾಟಿದ ಸೀತೆ, ಅವಳನ್ನು ಹೊತ್ತೊಯ್ದ ರಾವಣ, ಬಿಡಿಸಿಕೊಂಡು ಬಂದ ರಾಮ ಎಲ್ಲರೂ ಹಾಗೇ ಮನದ ಮೂಲೆಯಲ್ಲಿ ಹಾದು ಹೋಗುತ್ತಾರೆ ಅಲ್ಲವೇ? ಇದೇ ಇಲ್ಲಿನ ವೈಶಿಷ್ಟ್ಯ. ಇವೆಲ್ಲವನ್ನೂ ಬದುಕನ್ನು ರೂಪಿಸುವ ಆಧಾರದ ಹಿನ್ನೆಲೆಯಲ್ಲಿ ಸ್ವೀಕರಿಸಬೇಕೇ ಹೊರತು, ವೈಜ್ಞಾನಿಕ ಆಧಾರದ ಹಿನ್ನೆಲೆಯಲ್ಲಲ್ಲ!

ನಮ್ಮ ದೌರ್ಭಾಗ್ಯ ಹೇಗಿದೆ ನೋಡಿ… ಬೇರೆ ದೇಶ- ಧರ್ಮದವರಿರಲಿ, ನಮ್ಮವರೇ ನಮ್ಮ ಸಂಸ್ಕೃತಿಯನ್ನ, ಸಂಪ್ರದಾಯವನ್ನ, ನಂಬಿಕೆಗಳನ್ನ ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನಿಸುವ ಹಕ್ಕು ಖಂಡಿತಾ ಇದೆ. ಆದರೆ ಅವರದು ಪ್ರಶ್ನಿಸುವಿಕೆಯಲ್ಲ, ಹೀಯಾಳಿಕೆ ಅನ್ನೋದೊಂದು ದುರಂತ. ಮೂಢ ನಂಬಿಕೆಗಳು ಮಿತಿಮೀರಿ ಅದರಿಂದ ಜೀವಕ್ಕೆ, ಸಮಾಜಕ್ಕೆ ಘಾತವಾಗುವ ಸಂದರ್ಭದಲ್ಲಿ ಅದು ಸರಿಹೋದೀತು. ಆದರೆ ಇವರ ಮೂದಲಿಕೆಗಳು ತಿರಾ ನಿರುಪದ್ರವಿ ರಾಮ, ಕೃಷ್ಣ ಇತ್ಯಾದಿ ದೇವತೆಗಳ, ಅವರ ಚರಿತ್ರೆಯ ವಿಷಯದಲ್ಲೆಲ್ಲ ತೂರಿಕೊಳ್ಳುವುದೊಂದು ವಿಪರ್ಯಾಸ. ಆದರೂ ನನಗೆ ಅರ್ಥವಾಗದಒಂದು ವಿಷಯವಿದೆ. ಹೀಗೆ ನಂಬಿಕೆಗಳನ್ನು ಪ್ರಶ್ನಿಸುವ ಅವರ ತೆವಲಿಗೆ ಕೇವಲ ಹಿಂದುಗಳೇ ಗುರಿಯಾಗೋದೇಕೆ?

ಅಗ್ನಿ ಹೊತ್ತಿಸಿದಾಗ ಅದರಲ್ಲಿ ಮೂಡಿಬಂದ ಆಕಾರ ಹಿಂದಿನ ಪೋಪರದು, ಅವರು ಈಗಲೂ ಆ ರೂಪದಲ್ಲಿ ನಮ್ಮೊಡನಿದ್ದಾರೆ ಎಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದೆವಲ್ಲ, ಆಗ ನಮಗ್ಯಾರಿಗೂ ವೈಜ್ಞಾನಿಕ ಅಂಶಗಳ ಬಗ್ಗೆ ಯೋಚನೆಯೇ ಬರಲಿಲ್ಲವಲ್ಲ! ಬೆಂಕಿಯ ಮೂಲಕ ಬಂದು ದರ್ಶನ ಕೊಟ್ಟ ಪೋಪ್, ದೇಹ ಧರಿಸಿ ಬರಲಾರರೇ? ಎಂದು ನಾವೇಕೆ ಕೇಳಲಿಲ್ಲ? ಹಾಗೆ ಕೇಳಬಾರದು ಅನ್ನೋದು ಯಾಕೆ ಗೊತ್ತಾ? ಅದು ಶ್ರದ್ಧೆಯ ವಿಚಾರ. ಅದನ್ನು ಪ್ರಶ್ನಿಸಬಾರದು, ಹೀಯಾಳಿಸಬಾರದು! ಅದೇನೋ ಸರಿಯೇ. ಆದೇ, ಹಿಂದೂಗಳಾ ಯಜ್ಞ ಕುಂಡದಿಂದ ದೇವತೆಯ ಆಕೃತಿ ಮೂಡಿಬಂದರೆ, ಹಾಗೆಂದು ನಂಬಿಕೊಂಡರೆ, ಅದೆಷ್ಟು ಕಾಮೆಂಟುಗಳು ಹಾದಿಬೀದಿಯಲ್ಲಿ ಒದ್ದಾಡುತ್ತಿರಲಿಲ್ಲ ಹೇಳಿ!?

ಹಾಗೆ ಪ್ರಶ್ನೆ ಕೇಳುತ್ತ ಹೋದರೆ, ಜೀಸಸ್ ನೀರನ್ನು ಮುಟ್ಟಿ ಹೆಂಡ ಮಾಡಿದ್ದು ನಿಜವಾ? ಮೋಸೆಸ್ “ಭರವಸೆಯ ಭೂಮಿ” ಕೇಳಿ ಸಮುದ್ರದ ನಡುವೆ ಹಾದಿ ಬಿಡಿಸಿಕೊಂಡು ಹೋದನಲ್ಲ, ಅದು ಕೂಡ ಸತ್ಯವಾ? ಪೈಗಂಬರರ ಕೂದಲು ಕಾಶ್ಮೀರದ ಹಜರತ್ ಬಾಲ್ ಮಸೀದಿಯಲ್ಲಿದೆ ಅಂತಾರಲ್ಲ, ಹಾಗೆ ಪೈಗಂಬರರಿಗೂ ಮಸೀದಿಯಲ್ಲಿರುವ ಕೂದಲಿಗೂ ನಿಜಕ್ಕೂ ಸಂಬಂಧವಿದೆಯಾ? ಬುದ್ಧನ ಹಲ್ಲು ಶ್ರೀಲಂಕಾದಲ್ಲಿದೆ ಅಂತಾರೆ, ಹಾಗೆ ಬುದ್ಧನ ಹಲ್ಲು ಬೀಳೋದನ್ನೇ ಕಾದುಕೊಂಡು ಅದನ್ನ ಅಲ್ಲಿ ಕೊಂಡೊಯ್ದದ್ದು ಯಾರು? ಇವು ಕೂಡ ಕೇಳಬೇಕಾದ ಪ್ರಶ್ನೆಗಳೇ ಅನ್ನಿಸತ್ತೆ. ಆದರೆ, ಪರಂಪರಾನುಗತವಾಗಿ ಬಂದ ನಂಬಿಕೆಗಳಾನ್ನ ಪ್ರಶ್ನಿಸಿ ಆಘಾತ ಮಾಡಬಾರದು ಅನ್ನುವ ಕಾರಣದಿಂದ ಅವು ಪ್ರಶ್ನೆಗಳಾಗೋದಿಲ್ಲ.

ಈಗ ಮತ್ತೆ ರಾಮನತ್ತ ಬರೋಣ. ಒಂದಷ್ಟು ಉತ್ಪ್ರೇಕ್ಷೆಗಳನ್ನು ಬಿಟ್ಟರೆ ರಾಮನ ಕಥೆಯಲ್ಲಿ ಸಂಭವಿಸಲು ಸಾಧ್ಯವಿಲ್ಲ ಅನ್ನುವಂಥ ಯಾವ ವಿವರಣೆಗಳೂ ಇಲ್ಲ. ಆತನ ಆಡಳಿತ ಸೂತ್ರಗಳು ಇಂದಿಗೂ ಅದೆಷ್ಟು ಗಟ್ಟಿ ಅಂದರೆ, ಎಂಬಿಎ ವಿದ್ಯಾರ್ಥಿಗಳಿಗೆ ಬೋಧಿಸಲು ಅವನ್ನು ಹಾಗೆ ಹಾಗೇಯೇ ಬಳಸಿಕೊಳ್ಳಲು ಯೋಜನೆ ತಯಾರಿಸಲಾಗುತ್ತಿದೆ. ಭಾರತಕ್ಕೆ ಜಾತ್ಯತೀತತೆಯ ಪಾಠ ಹೇಳಿಕೊಟ್ಟ ಗಾಂಧೀಜಿಯವರೂ ರಾಮ ರಾಜ್ಯದ ಕನಸು ಕಂಡು, ಅದನ್ನು ನನಸಾಗಿಸುವ ಆಸೆ ಇರಿಸಿಕೊಂಡಿದ್ದರು. ಆಗೆಲ್ಲ ಅವರ ರಾಮ ರಾಜ್ಯದ ಪರಿಕಲ್ಪನೆ ಇದ್ದಿದ್ದು ಇಂದಿನ ಬಿಜೆಪಿ ಯ ರಾಜಕೀಯದ ರಾಮರಾಜ್ಯದಂತಲ್ಲ. ಗಾಂಧೀಜಿ ಕಲ್ಪನೆಯಲ್ಲಿ ರಾಮ ಹಿಂದೂವಾಗಿರಲಿಲ್ಲ…. ಕೇವಲ ಹಿಂದೂ ಮಾತ್ರ ಆಗಿರಲಿಲ್ಲ…. ಅವನು ಪ್ರತಿಯೊಬ್ಬರೂ ಅನುಸರಿಸಬೇಕಾದ ಆದರ್ಶವಾಗಿದ್ದ.

ಈಗ ರಾಮಸೇತುವಿಗೆ ಬನ್ನಿ. ಈಗಿನ ವಿವಾದದ ಕೇಂದ್ರಬಿಂದು ಅದೇ ತಾನೇ? ನಮ್ಮ ನಂಬಿಕೆ ಒತ್ತಟ್ಟಿಗಿರಲಿ. ನಾವು ಹಿಂದೆಮುಂದೆ ಗೊತ್ತಿಲ್ಲದೆ ಆ ಯೋಜನೆಯನ್ನು ವಿರೋಧಿಸೋದು ಬೇಡ. ಈ ಯೋಜನೆಯಿಂದ ಬೆಸ್ತರ ಪಡಿಪಾಟಲು ಎಂಥದ್ದಾಗುತ್ತದೆಂದು ನಮ್ಮ ಸರ್ಕಾರಗಳ ಪರಿಹಾರ ಯೋಜನೆಗಳನ್ನು ಕಂಡವರೆಲ್ಲರಿಗೂ ಗೊತ್ತೇ ಇರುತ್ತದೆ. ಅಷ್ಟಾದರೂ ನಮ್ಮ ರಾಜಕಾರಣಿಗಳಿಗೆ ರಾಮಸೇತುವನ್ನು ಒಡೆದು, ಅಲ್ಲಿ ಹಡಗುಗಳು ಹಾದುಹೋಗುವ ಅವಕಾಶ ಮಾಡಿಕೊಡಬೇಕಾಗಿದೆ.

ಈ ಯೋಜನೆಯಿಂದ ಅಪಾರ ಇಂಧನ ಮತ್ತು ಶ್ರೀಲಂಕಾ ಸುತ್ತಿ ಬರುವ ಸಮಯ ಎರಡೂ ಉಳಿತಾಯವಾಗುತ್ತದೆಂದು ಜನರ ಹಾದಿ ತಪ್ಪಿಸುವ ಪ್ರಯತ್ನ ವ್ಯವಸ್ಥಿತವಾಗಿ ಸಾಗುತ್ತಿದೆ. ಆದರೆ ಈ ಯೋಜನೆಯ ಅಧ್ಯಯನದಲ್ಲಿ ವಿಶೇಷ ಆಸಕ್ತಿವಹಿಸಿರುವ ಕ್ಯಾಪ್ಟನ್ ಬಾಲಕೃಷ್ಣ ಅವರ ಪ್ರಕಾರ, ಕೋಲ್ಕೊತಾದಿಂದ ತೂತ್ತುಕುಡಿ (ಟುಟುಕಾರ್ನ್)ಗೆ ಈ ಮಾರ್ಗದ ಮೂಲಕ ಪ್ರಯಾಣಿಸಿದರೆ ಉಳಿತಾಯವಾಗುವ ಸಮಯ ಕೇವಲ ಒಂದೂವರೆ ಗಂಟೆ!
ದೊಡ್ಡ ದೊಡ್ಡ ಹಡಗುಗಳಿಗೆ ೩೦ ಸಾವಿರ ಟ್ನ್ ನಷ್ಟು ಭಾರವೆಂದರೆ ಅತಿ ಕಡಿಮೆ. ಅದನ್ನು ’ಡೆಡ್ ವೈಟ್’ ಅನ್ನುತ್ತಾರೆ. ಅಷ್ಟು ಕಡಿಮೆ ಭಾರ ಹೊತ್ತ ಹಡಗನ್ನು ಯಾವ ನಾವಿಕ ಕೂಡ ಈ ಕಾಲುವೆಯ ಮೂಲಕ ಒಯ್ಯಲು ಇಚ್ಚಿಸಲಾರ. ಹಾಗೆಂದು ಅಪಾರ ಅನುಭವವುಳ್ಳ ಬಾಲಕೃಷ್ಣರ ಹೇಳಿಕೆ.
೧೫೦ ಕಿ.ಮೀ.ಗೂ ಹೆಚ್ಚು ದೂರವನ್ನು ೬ ನಾಟಿಕಲ್ ಮೈಲ್ ನಷ್ಟು ವೇಗದಲ್ಲಿ ಸಾಗಲು ೫ ಲಕ್ಷದಷ್ಟು ಶುಲ್ಕ ಕಟ್ಟುವ ಧೈರ್ಯ, ಮೂರ್ಖತನ ಎರಡನ್ನೂ ಯಾರೂ ಮಾಡಲಾರರು ಬಿಡಿ!

ಬರಿ ಇಷ್ಟೆ ಅಲ್ಲ, ಈ ಯೋಜನೆಯಿಂದ ನಮಗೆ ಮತ್ತೊಂದು ಭಾರೀ ನಷ್ಟ ಕಾದಿದೆ… ರಾಮಸೇತುವಿನ ಬಳಿಯ ಸಾಗರದ ಹರಿವಿನ ತೀವ್ರತೆಯಿಂದಾಗಿ ಅಲ್ಲಿ ಥೋರಿಯಮ್ ಎಂಬ ಧಾತುವಿನ ಪ್ರಮಾಣ ಸಾಕಷ್ಟಿದೆ. ಕೇರಳದ ಕೆಲವು ಭಾಗಗಳಲ್ಲಿ, ತಮಿಳುನಾಡಿನ ಅನೇಕ ಭಾಗಗಳಲ್ಲಿ ಕಂಡುಬರುವ ಈ ಥೋರಿಯಮ್, ಭವಿಷ್ಯ ಭಾರತದ ವಿದ್ಯುತ್ ಕೊರತೆ ನೀಗಿಸಲಿರುವ ಭಂಡಾರ ಎಂದೇ ಭಾವಿಸಲಾಗುತ್ತದೆ. ಭಾರತ್ ಅಟಾಮಿಕ್ ರಿಸರ್ಚ್ ಸೆಂಟರಿನ ಅಧ್ಯಯನದ ಪ್ರಕಾರ, ಭಾರತದಲ್ಲಿರುವ ಒಟ್ಟು ಥೋರಿಯಮ್ ಪ್ರಮಾಣ ೩ ಲಕ್ಷ ೬೦ ಸಾವಿರ ಟನ್ ನಷ್ಟಾದರೂ ಇದೆ. ಇಷ್ಟು ಪ್ರಮಾಣಾದ ಥೋರಿಯಮ್ ಅನ್ನು ರಿಯಾಕ್ಟರ್ ಗಲಳಲ್ಲಿ ಸೂಕ್ತವಾಗಿ ಬಳಸಿಕೊಂಡರೆ, ೩ಲಕ್ಷ೫೮ಸಾವಿರ ಗಿಗಾವ್ಯಾಟ್ ಎಲೆಕ್ಟ್ರಿಕಲ್ಸ್ ನಷ್ಟು ವಿದ್ಯುತ್ ಉತ್ಪಾದಿಸಬಹುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಮ್ಮಲ್ಲಿರುವ ಥೋರಿಯಮ್ ನಿಕ್ಷೇಪ ಮುಂದಿನ ೩೮೯ ವರ್ಷಗಳ ಕಾಲ ೪ ಲಕ್ಷ ಮೆಗಾವ್ಯಾಟ್ ನಷ್ಟು ವಿದ್ಯುತ್ತನ್ನು ಪ್ರತಿ ವರ್ಷ ಉತ್ಪಾದಿಸಬಲ್ಲದು. ಬರಲಿರುವ ಶತಮಾನ, ಭಾರತದ ಶತಮಾನವಾಗಲು ಈ ಒಂದು ಅಂಶವೇ ಸಾಕು!

ಸಧ್ಯದ ಮಟ್ಟಿಗೆ ಥೋರಿಯಮ್ ಬಳಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಭಾರತದಲ್ಲಿಲ್ಲ. ಅಮೆರಿಕದೊಂದಿಗೆ ಅಣು ಒಪ್ಪಂದ ಮಾಡಿಕೊಳ್ಳುವ ಬದಲು, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರೆ, ಭಾರತ ಬರಲಿರುವ ದಿನಗಳಲ್ಲಿ ಸ್ವಾವಲಂಬಿಯಾಗಿ ತಲೆ ಎತ್ತಿ ನಡೆಯಬಹುದಿತ್ತೆಂಬುದರಲ್ಲಿ ವಿಜ್ಞಾನಿಗಳಿಗಂತೂ ಯಾವ ಸಂಶಯವೂ ಇಲ್ಲ.

ಆದರೆ, ಈಗ ರಾಮ ಸೇತು ಸಾಶದಿಂದ ಥೋರಿಯಮ್ ನಿಕ್ಷೇಪದ ಮೇಲೆ ಆಘಾತವಾಗುವ ಸಾಧ್ಯತೆ ದಟ್ಟವಾಗಿದೆ. ತಡೆಗೋಡೆಯಂತಿರುವ ಸೇತುವೆಯ ಒಡೆಯುವಿಕೆಯಿಂದ ಮುನ್ನುಗ್ಗುವ ಭೀಕರ ಅಲೆಗಳಿಂದ ಅಥವಾ ಸುನಾಮಿಯಂಥಹ ಅವಘಾಡಗಳಿಂದ ಈ ನಿಕ್ಷೇಪ ಸಮುದ್ರದೊಳಗೆ ಕರಗಿಹೋಗುವ ಸಂಭಾವವಿದೆ ಎನ್ನುವುದು ವಿಜ್ಞಾನಿಗಳ ಅಳಲು.
ಅದಕ್ಕಿಂತ ದೊಡ್ಡ ದುರಂತವೆಂದರೆ, ಥೋರಿಯಮ್ ನಿಕ್ಶೇಪ ಹೊತ್ತ ಆ ಮರಳನ್ನು ಅಮೆರಿಕಕ್ಕೆ ರಫ್ತು ಮಾಡುವ ಪ್ರಯತ್ನ ನಡೆದಿರುವುದು.
ಹಿಂದಿನ ಚರಿತ್ರೆ, ಪುರಾಣ, ಜನರ ಭಾವನೆಗಳ ಮಾತು ಬಿಡಿ. ಯಾವ ದೇಶವೂ ಹೀಗೆ ತನ್ನ ವರ್ತಮಾನದ ನಿಧಿಯನ್ನು ಪರಭಾರೆ ಮಾಡುವ ಮೂರ್ಖತನ ಮಾಡಲಾರದು. ನಮ್ಮ ದೇಶವೊಂದನ್ನು ಬಿಟ್ಟು!

Comments Posted (0)