ಗಾಂಧಿ ಎಂಬ ‘ಮಹಾತ್ಮ’

Posted by ಅರುಂಧತಿ | Posted in | Posted on 7:07 AM

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.
ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”
ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!
ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.
ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.
ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.
ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!
ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು!
ಅವರ ಆತ್ಮ ಕಥೆಯಲ್ಲಿ ಗಾಂಧೀಜಿ ಬರೆದುಕೊಂಡಿದ್ದಾರೆ, “ತಂದೆಸಾವಿನ ಜೊತೆ ಸೆಣಸುತ್ತಿದ್ದಾಗ, ನಾನು ಅವರ ಕಾಲು ಒತ್ತುವುದು ಬಿಟ್ಟು ಹೆಂಡತಿಯೊಡನೆ ಸರಸದಲ್ಲಿದ್ದೆ. ತಂದೆ ಸತ್ತ ವಿಷಯ ತಿಳಿದಿದ್ದೂ ಆಗಲೇ! ನನಗೆ ಅಂದು ನನ್ನ ಮೇಲೇ ಅಸಹ್ಯವಾಗಿತ್ತು” ಅಂತ. ಆ ಪರಿ ಎತ್ತರಕ್ಕೇರಿರುವ ಮನುಷ್ಯ ಈ ಪರಿಯ ಸತ್ಯಗಳನ್ನು ಹೇಳಬಹುದು ಅನ್ನಿಸುತ್ತಾ? ಯೋಚಿಸಿ. ಅದು ಗಾಂಧೀಜಿಗೆ ಮಾತ್ರ ಸಾಧ್ಯ. ಅದಕ್ಕೇ, ಅವರು ‘ಮಹಾತ್ಮ’!

Comments Posted (0)