ಮೇರಾ ಹೋ ಮನ್ ಸ್ವದೇಶಿ….

Posted by ಅರುಂಧತಿ | Posted in | Posted on 7:09 AM

ಸ್ವದೇಶಿ ಎನ್ನುವುದು ಸಂಕುಚಿತ ಭಾವನೆ ಅಂತ ಕೆಲವರು ವಾದ ಹೂಡೋದನ್ನ ನಾನು ಕೇಳಿದ್ದೇನೆ. ಖಂಡಿತ ಅದು ತಪ್ಪು. ಸ್ವದೇಶೀಯತೆ ಕೇವಲ ಭಾವನೆಗೆ ಸೀಮಿತವಲ್ಲ. ಅದೊಂದು ವ್ಯವಸ್ಥೆ. ’ಸ್ವದೇಶಿ’ ಅಂದರೆ ವಿಶ್ವವೆಲ್ಲವೂ ಒಂದಾಗಿ ಸಂತೋಷದಿಂದ ಇರಬೇಕೆನ್ನುವ ವಿಶ್ವ ಮಾನವ ಧರ್ಮದ ವಿಕೇಂದ್ರೀಕೃತ ರೂಪ.

spinning.jpg

ಈ ವಿಶ್ವ ಮಾನವ ಧರ್ಮದ ಮೊದಲ ಹೆಜ್ಜೆ ಸ್ವಾರ್ಥ. ಇಲ್ಲಿ ಸ್ವಾರ್ಥ ಅಂದರೆ ತಮ್ಮ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡು ಸ್ವಾವಲಂಬಿಗಳಾಗುವುದು ಅನ್ನುವ ವಿಸ್ತೃತಾರ್ಥವಿದೆ. ಇದು ಮೊದಲು ವೈಯಕ್ತಿಕ, ನಂತರ ಕುಟುಂಬ, ಆ ಮೂಲಕ ರಾಷ್ಟ್ರದ ಸ್ವಾರ್ಥವಾಗಿ ಮಾರ್ಪಡುತ್ತದೆ. ನಮ್ಮ ದೇಶ ಮೊದಲು ಸ್ವಾವಲಂಬಿಯಾಗಬೇಕು. ಆಗ ಇತರ ದೇಶಗಳ ಬಗ್ಗೆ, ಇಡಿಯ ಜಗತ್ತಿನ ಬಗ್ಗೆ ಚಿಂತಿಸಲು ಅರ್ಹತೆ ದೊರೆಯುತ್ತದೆ. ಇದು ಪ್ರತಿಯೊಂದು ದೇಶಕ್ಕೂ ಅನ್ವಯಿಸುವ ಮಾತು. ಸ್ವದೇಶಿ ಚಿಂತನೆ ರಾಷ್ಟ್ರದೊಳಗಿನ ಬಾಂಧವ್ಯವನ್ನು ಬೆಸೆಯಲು, ಒಗ್ಗಟ್ಟು ಮೂಡಿಸಲು ಸಹಕಾರಿ. ನಮ್ಮ ಅಗತ್ಯಗಳಿಗೆ ನಾವು ನಮ್ಮದೇ ಜನರನ್ನು ಅವಲಂಬಿಸುವುದೇ ಸ್ವದೇಶಿ. ನಮ್ಮ ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ರೂಢಿಸಿಕೊಳ್ಳುವ ಜೀವನ ಶೈಲಿ- ಸ್ವದೇಶಿ. ರಾಷ್ಟ್ರದ ಆರ್ಥಿಕತೆ, ಸಮಾಜದ ಎಲ್ಲ ವರ್ಗದ ಉನ್ನತಿಗಾಗಿ ಮನಸಾ ಬಯಸುವುದೂ ಸ್ವದೇಶೀಯತೆಯೇ. ಸ್ವದೇಶಿ ಚಿಂತನೆ ಅಂಧಾಭಿಮಾನವಲ್ಲ. ಅದು ದೂರ ದೃಷ್ಟಿಯ ಪ್ರತೀಕ. ರಾಷ್ಟ್ರ ಚಿಂತನೆಯ ವೈಶಾಲ್ಯತೆಯ, ಕಾಳಜಿಯ ಕ್ರಿಯಾ ರೂಪ.

ನಮ್ಮ ಆಂತರ್ಯದಲ್ಲೇನೋ ಸ್ವದೇಶಿ ಚಿಂತನೆಗಳಿರುತ್ತದೆ. ಆದರೂ ಕೆಲವು ಬಾರಿ ನಮಗೆ ಸಂಪೂರ್ಣವಾಗಿ ಈ ಶೈಲಿಯನ್ನು ಅನುಸರಿಸುವುದು ಸಾಧ್ಯವಾಗುವುದಿಲ್ಲ. ಮಾರುಕಟ್ಟೆಯಲ್ಲಿ ತುಂಬಿಕೊಂಡ ವಿದೇಶಿ ವಸ್ತುಗಳು ನಮ್ಮ ಮನೆ ತುಂಬುತ್ತಿರುತ್ತವೆ. ಇದಕ್ಕೆ ನಮ್ಮ ದೇಶದಲ್ಲೇ ತಯಾರಾಗುತ್ತಿರುವ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದೊಂದು ಕಾರಣವಾದರೆ, ಮನಸೂರೆಗೊಳ್ಳುವ ಜಾಹೀರಾತುಗಳು ನಮ್ಮನ್ನು ಮರುಳು ಮಾಡಿ ವಿದೇಶಿ ವಸ್ತುಗಳ ಕಡೆಗೆಗಮನ ಸೆಳೆಯುತ್ತವೆ. ಇಂತಹ ಜಾಹೀರಾತುಗಳಿಗಾಗಿ ಬಹುರಾಷ್ಟ್ರೀಯ ಕಂಪೆನಿಗಳು ಕೋಟ್ಯಂತರ ರೂಪಾಯಿಗಳಷ್ಟು ಹಣ ಚೆಲ್ಲುತ್ತವೆಂದರೆ, ಅವು ನಮ್ಮಿಂದ ಕೊಳ್ಳೆ ಹೊಡೆಯುವ ಲಾಭವೆಷ್ಟಿರಬಹುದು, ನೀವೇ ಊಹಿಸಿ ನೋಡಿ!

ಜಾಗತೀಕರಣದ ರೀತಿನೀತಿಗಳು ಈ ಕಂಪೆನಿಗಳೊಂದು ವರದಾನ. ಹಾಗೆ ನೋಡಿದರೆ ಜಾಗತೀಕರಣ ಎನ್ನುವ ಪದ ಹುಟ್ಟಿಕೊಂಡಿದ್ದೇ ಮುಂದುವರಿದ ರಾಷ್ಟ್ರಗಳ ಜನರು ತಿರಸ್ಕರಿಸಿದ ವಸ್ತುಗಳಿಗೊಂದು ಮಾರುಕಟ್ಟೆ ಒದಗಿಸಲಿಕ್ಕೆ! ಜಾಗತೀಕರಣದ ಹೆಸರಲ್ಲಿ ಇಂದು ವಿಶ್ವದ ನೂರಾರು ರಾಷ್ಟ್ರಗಳು ಪ್ರಬಲ ರಾಷ್ಟ್ರಗಳ ಕೈಗೆ ಸಿಕ್ಕು ನಲುಗುತ್ತಿವೆ. ಅವುಗಳ ಮೇಲೆ ಸವಾರಿ ನಡೆಸಲು ವರ್ಲ್ಡ್ ಬ್ಯಾಂಕ್ ಸಾಲದ ಆಮಿಷ ಬೇರೆ.

ಈ ರಾಷ್ಟ್ರಗಳು ತೃತೀಯ ಜಗತ್ತಿನೊಳಗೆ ಕಾಲಿಡೋದು, ನಾವು ಉನ್ನತ ತಂತ್ರಜ್ಞಾನ ಕೊಡ್ತೇವೆ ಎಂದು ಹೇಳುವ ಮೂಲಕ. ಅವುಗಳು ಒಡ್ಡುವ ಆಮಿಷಕ್ಕೆ ಬಲಿಯಾದ ರಾಜಕಾರಣಿಗಳು, ವಿದೇಶಿ ಕಂಪೆನಿಗಳು ಬಂದರೆ ದೇಶಕ್ಕೆ ತಂತ್ರಜ್ಞಾನ ಹರಿದು ಬರುತ್ತೆ ಎನ್ನುತ್ತ ಕೆಂಪು ಹಾಸಿನ ಸ್ವಾಗತ ನೀಡುತ್ತಾರೆ. ಹೀಗೆ ಈ ವರೆಗೆ ಭಾರತದ ಒಳ ನುಸುಳಿರುವ ಕಂಪೆನಿಗಳಲ್ಲಿ ಶೇ.೮೦ರಶ್ಟು ಕಂಪೆನಿಗಳು ಶೂನ್ಯ ತಂತ್ರಜ್ಞಾನ ಕ್ಷೇತ್ರದ್ದು! ಅವು ನಮಗೆ ಮಾರುತ್ತಿರುವುದು ಸಾಫ್ಟ್ ಡ್ರಿಂಕ್ಸ್, ಚಿಪ್ಸ್, ಸೋಪ್ ಇತ್ಯಾದಿ ಕೆಲಸಕ್ಕೆ ಬಾರದ ಉತ್ಪನ್ನಗಳನ್ನು!! ಈ ಯಾವ ಕಂಪೆನಿಯೂ ನಮಗೆ ಅಗತ್ಯವಾಗಿರುವ ಸಂಪರ್ಕ ತಂತ್ರಜ್ಞಾನವನ್ನಾಗಲೀ ಪರಮಾಣು ತಂತ್ರಜ್ಞಾನವನ್ನಾಗಲೀ ಜೈವಿಕ- ರಾಸಾಯನಿಕ ತಂತ್ರಜ್ಞಾನವಾಗಲೀ ಈ ಯಾವುದನ್ನೂ ಕೊಡುತ್ತಿಲ್ಲ. ಇಂದು ನಮಗೆ ಬಣ್ಣದ ಬಾಟಲಿಗಳಲ್ಲಿ ವಿಷ ಕುಡಿಸುತ್ತಿರುವ ಕೋಕ್ ಕಂಪೆನಿ ಭಾರತಕ್ಕೆ ರಿ ಎಂಟ್ರಿ ಪಡೆದಿದ್ದು ತರಕಾರಿ ಸಂಸ್ಕರಣಾ ಘಟಕ ತೆರೆಯುತ್ತೇವೆ ಎಂಡು ಹೇಳಿಕೊಂಡು. ಅದರಂಥ ಕಂಪೆನಿಗಳೆಲ್ಲವೂ ನಮ್ಮ ದೇಶದೊಳಗೆ ನುಸುಳಿ ನಮ್ಮ ಮಾರುಕಟ್ಟೆ ಮಾತ್ರವಲ್ಲ, ರಾಜಕೀಯದಲ್ಲೂ ಹಸ್ತಕ್ಷೇಪ ಮಾಡುತ್ತಿವೆ. ನಮ್ಮ ಲಘು ಉದ್ಯೋಗಗಳಿಗೆ, ಕೃಷಿ ಕ್ಷೇತ್ರಕ್ಕೆ ನಿರಂತರ ಪ್ರಹಾರ ನೀಡುತ್ತಲೇ ಇವೆ.

ಉದಾಹರಣೆಗೆ ನೋಡಿ: ಒಂದು ಅಂದಾಜಿನ ಪ್ರಕಾರ ಹಾಲೆಂಡ್ ಮೂಲದ ಬಹು ರಾಷ್ಟ್ರೀಯ ಕಂಪೆನಿ ಹಿಂದೂಸ್ಥಾನ್ ಲೀವರ್ ತಯಾರಿಸುವ ಉತ್ಪಾದನೆಯನ್ನು ಕೇವಲ ಕರ್ನಾಟಕದ ಜನತೆ ಖರೀದಿಸುವುದನ್ನು ಬಿಟ್ಟು ಸ್ವದೇಶಿ ವಸ್ತುಗಳ ಖರೀದಿಗೆ ತೊಡಗಿದರೂ ಸುಮಾರು ೫೦ ಸಾವಿರ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹೀಗಿರುವಾಗ ಇಡಿಯ ದೇಶ ಈ ಕಂಪೆನಿಯ ವಸ್ತುಗಳನ್ನು ಬಹಿಷ್ಕರಿಸಿದರೆ ಎಷ್ಟು ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ ಯೋಚಿಸಿ… ಇಂಥಹ ನೂರಾರು ಕಂಪೆನಿಗಳು ಭಾರತದಲ್ಲಿವೆ. ಹೀಗೆ ಅವುಗಳ ಎಂಟ್ರಿಯಾದ ಮೇಲೆ ನಮ್ಮ ಅದೆಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿವೆ ಎಂದು ನೀವೇ ಲೆಕ್ಕ ಹಾಕಿ.

ನಾವು ವಿದೇಶಿ ಕಂಪೆನಿಗಳನ್ನು ತಿರಸ್ಕರಿಸಬೇಕೆನ್ನುವುದು ಇದೇ ಕಾರಣಕ್ಕೆ. ಪ್ರತಿಯೊಬ್ಬರಿಗೂ ಪ್ರತಿಯೊಂದನ್ನೂ ರಾಷ್ಟ್ರದ ಮಟ್ಟದಲ್ಲಿ ಯೋಚಿಸೋದು ಸಾಧ್ಯವಾಗೋಲ್ಲ. ಆದರೆ ತನ್ನ ವೈಯಕ್ತಿಕ ಮಟ್ಟದಿಂದಲೇ ರಾಷ್ಟ್ರ ಮಟ್ಟದ ಚಿಂತನೆ ನಡೆಸಬಹುದು. ಅದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಆರ್ಥಿಕತೆ, ಸಂಸ್ಕೃತಿ, ತನ್ನ ಕುಟುಂಬ ಮತ್ತು ತನ್ನ ಆರೋಗ್ಯ ಇವಿಷ್ಟರಲ್ಲೂ ಸ್ವಾವಲಂಬನೆಯಿಂದ ಸಮಗ್ರ ಸುಧಾರಣೆಗೆ ಪ್ರಯತ್ನಿಸುವಂತಾಗಬೇಕು. ಆಗದೇ?

Comments Posted (0)