ಸೇವೆಯೆಂಬ ಯಜ್ಞದಲ್ಲಿ….

Posted by ಅರುಂಧತಿ | Posted in | Posted on 1:29 AM

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರು ಮುಗಿವ ಮುನ್ನವೇ ಎಡಕ್ಕೆ ತಿರುಗಿದರೆ ಟಿಂಬರ್‌ಯಾರ್ಡ್ ಲೇಔಟ್ ಇದೆ. ನಿರ್ದಾಕ್ಷಿಣ್ಯವಾಗಿ ಕಡಿದು ಉರುಳಿಸಿದ ಬೃಹತ್ ಮರಗಳ ಮಾರಾಟಗಾರರು ಆ ದಾರಿಯುದ್ದಕ್ಕೂ ಇದ್ದಾರೆ. ಆ ಹಾದಿಯ ತುದಿಯಲ್ಲಿನ ಮೋರಿ ಹಾರಿದೊಡನೆ ದೊಡ್ಡ ಗೋಡೌನು ಕಾಣುತ್ತದೆ. ಅದರ ತುಂಬಾ ಕೆಮಿಕಲ್‌ಗಳ ಅಸಹ್ಯ ವಾಸನೆ. ಅದನ್ನು ಮೀರಿ ಮೆಟ್ಟಿಲು ಹತ್ತುವ ವೇಳೆಗೆ ಮಕ್ಕಳ ಗೌಜು ಗದ್ದಲ ಕೇಳಲಾರಂಭಿಸುತ್ತದೆ. ಒಟ್ಟು ೬೪ ಮಕ್ಕಳು. ಕೊಳಕಿನ ಮುದ್ದೆಯಂತಿರುವ ಪುಟ್ಟ ಅನಾಥ ಮಕ್ಕಳು ಓದುತ್ತಿರುತ್ತಾರೆ, ಆಡುತ್ತಿರುತ್ತಾರೆ ಇಲ್ಲವೇ ಭಜನೆಗೆ ಕುಳಿತಿರುತ್ತಾರೆ.


ಅದು ನರೇಂದ್ರ ನೆಲೆ. ನಾವೆಲ್ಲ, ’ಸ್ಲಮ್ ಏರಿಯಾದವರು’ ಅಂತ ಹೇಳಿ ತುಚ್ಛೀಕರಿಸಿಬಿಡುವ ಮಕ್ಕಳನ್ನು ಒಂದೆಡೆ ಸೇರಿಸಿ ಊಟ- ವಸತಿಯ ವ್ಯವಸ್ಥೆ ಮಾಡಿ ಓದಿಗೂ ಅವಕಾಶ ಕಲ್ಪಿಸುವ ಅಪರೂಪದ ತಾಣ. ಚಿಂದಿ ಆಯುತ್ತ, ಹೀನ ಶಬ್ದಗಳನ್ನಾಡುತ್ತಾ ಕಾಲ ಕಳೆಯಬೇಕಿದ್ದ ವಿನೋದನಂತಹ ಪೋರರು ಅಲ್ಲಿ ವೇದಮಂತ್ರಗಳನ್ನು ಶುದ್ಧವಾಗಿ ಒಪ್ಪಿಸುತ್ತಾರೆ. ದೂರದ ವಿಜಾಪುರದಿಂದ ಬಂದ ಸಂಗಪ್ಪನಂಥವರು ಎಳೆಯ ಕೈಗಳಿಂದ ಬಿಡಿಸಿದ ಬಣ್ಣದ ಚಿತ್ರಗಳನ್ನು ಎದುರಿಗೆ ಹರವುತ್ತಾರೆ. ಸೇವೆಗಿಂತ ಮೊದಲು ಇತರರನ್ನು ಪ್ರೀತಿಸುವುದನ್ನು ಕಲಿ ಎಂಬ ಅಂಬೇಡ್ಕರರ ಮಾತನ್ನು ಮಣಿಕಂಠ ಮುದ್ದುಮುದ್ದಾಗಿ ಹೇಳುತ್ತಾನೆ. ಇಂತಹ ಮಕ್ಕಳಿಗೋಸ್ಕರವೇ ಕಾಲ್ ಸೆಂಟರಿನ ಕೈತುಂಬ ಸಂಬಳದ ಕೆಲಸಕ್ಕೂ ಸಲಾಮು ಹೊಡೆದು ಧಾವಿಸಿರುವ ಡಿಪ್ಲೊಮಾ ಮಾಡಿಕೊಂಡ ರವಿ, ಮಧು ಇವರನ್ನು ಕಂಡಾಗಲಂತೂ ಹೊಸದೊಂದು ಲೋಕಕ್ಕೆ ಹೋದಂತಾಗುತ್ತದೆ.!
’ಬಹುರತ್ನ ಪ್ರಸವೀ ಬಾರತೀ’ ಅಂತ ಹೇಳಿದ್ದೇ ಅದಕ್ಕೆ. ಯುವಶಕ್ತಿ ಹಾಳಾಗಿಯೇ ಹೋಯ್ತು ಎಂದು ಹಲಬುತ್ತಿರುವಾಗಲೇ ಸಾವಿರಾರು ಯುವಕರು ಪಥದರ್ಶಕರಾಗಿ ಬಂದು ಬಿಡುತ್ತಾರೆ. ಅಮೃತತ್ವದ ಬುಡದಲ್ಲಿರೋದು ತ್ಯಾಗ’ ಎಂಬ ಋಷಿವಾಕ್ಯವನ್ನು ಮತ್ತೆಮತ್ತೆ ಸಾಧಿಸಿಬಿಡುತ್ತಾರೆ.
ಇವತ್ತಿನ ಮಟ್ಟಿಗೆ ಸಾವಿರಾರು ಯುವಕಯುವತಿಯರು ಒಂದೇ ಸೂರಿನಡಿ ಕೆಲಸ ಮಾಡುವಲ್ಲಿ ಅಜಿತ್‌ಜೀಯವರ ಕೈಚಳಕ ಸಾಕಷ್ಟಿದೆ. ಬರೋಬ್ಬರಿ ೨೫ ವರ್ಷಗಳ ಹಿಂದೆ ಅವರೊಂದು ಚೆಂದದ ಕನಸು ಕಟ್ಟಿದ್ದರು. ದೇಶದ ತರುಣರು ಸೇವಾಕಾರ್ಯಕ್ಕೆ ಪಡೆಯಾಗಿ ಬರಬೇಕೆಂಬ ಆಸೆ ಹೊತ್ತಿದ್ದರು. ಅದೇನು ಛಾತಿಯೋ ಏನೋ? ಸೇವೆ ಮಾಡುವ ಇಚ್ಛೆಯುಳ್ಳ ಯುವಕ ಯುವತಿಯರು ಬನ್ನಿ ಎಂಬ ಪ್ರಕಟಣೆ ಕೊಟ್ಟರು. ಉತ್ಸಾಹದಿಂದ ಓಡೋಡಿ ಬಂದವರಿಗೆ ತರಬೇತಿಯೂ ಆಯ್ತು. ಪುರುಷರಿಗೇನೋ ಜವಾಬ್ದಾರಿ ನೀಡಿದ್ದಾಯ್ತು, ಮಹಿಳೆಯರನ್ನು ಕಳಿಸುದೆಲ್ಲಿ? ಅಜಿತ್‌ಜೀಗೆ ಪರದಾಟ. ಆದರೂ ಧೆsರ್ಯ ತಂದುಕೊಂಡರು. ಹಿಂದೂ ಸೇವಾ ಪ್ರತಿಷ್ಠಾನ ಹುಟ್ಟು ಹಾಕಿದರು. ಹಳ್ಳಿಹಳ್ಳಿಗೆ ಹೋಗಿ ಶಾಲೆ ತೆರೆಯುವ ಸೇವಾಕಾರ್ಯ ಮಾಡುವ ಸಾಹಸಕ್ಕೆ ಕೈಯಿಟ್ಟರು.
ನಾವೆಲ್ಲ ತಿರುಗಾಟಕ್ಕೆಂದು ಹೋಗಲೂ ಹೆದರುವ ಗುಲ್ಬರ್ಗದ ಕುಗ್ರಾಮವೊಂದಕ್ಕೆ ಆಗತಾನೆ ಪ್ರತಿಷ್ಠಾನ ಸೇರಿದ್ದ ಭಗಿನಿಯೊಬ್ಬರು ಹೊರಟು ನಿಂತಿದ್ದರು. ಕುಡುಕರ ತವರೂರಾದ ಆ ಹಳ್ಳಿಯಲ್ಲಿ ಬದುಕು ದುಭರವೆಂಬುದು ಆಕೆಗೂ ಗೊತ್ತಿತ್ತು. ಆದರೆ ತನ್ನ ಸರಳ ನಡೆ, ಮೃದು ಮಾತುಗಳಿಂದ ಜನರ ಮನಸ್ಸನ್ನು ಗೆಲ್ಲುವ ಧೆsರ್ಯ ಆಕೆಗಿತ್ತು. ಬೆಳಗ್ಗೆ ಬೇಗ ಎದ್ದವಳು ಹತ್ತಿರವಿದ್ದವರ ಮನೆಯ ಬಾಗಿಲಿಗೆ ನೀರು ಹಾಕಿ ರಂಗೋಲಿಯಿಡುತ್ತಿದ್ದಳು. ಪೊರಕೆ ಹಿಡಿದು ರಸ್ತೆ ಗುಡಿಸುತ್ತಿದ್ದಳು. ಮಕ್ಕಳನ್ನು ಬರಸೆಳೆದು ಅಪ್ಪಿ ಪಾಠ ಮಾಡುತ್ತಿದ್ದಳು. ನೋಡನೋಡುತ್ತಲೇ ಆ ಊರವರ ಪಾಲಿಗೆ ತಾನೇ ಮಗುವಿನಂತಾಗಿಬಿಟ್ಟಳು. ಆಕೆಯ ಮುಂದೆ ಕುಡಿಯುವುದು, ಬೀಡಿ ಸೇದುವುದು, ಕೊನೆಗೆ ಕೆಟ್ಟ ಮಾತಾಡುವುದೂ ಘೋರ ಪಾಪ ಎಂದು ಜನ ಭಾವಿಸತೊಡಗಿದರು. ಊರು ಬದಲಾಯಿತು. ನಮ್ ಮಗೀಗ ಎಲ್ಲಿಗೂ ಒಯ್ಯಬ್ಯಾಡ್ರಿ ಎಂದು ಜನರೇ ಪ್ರತಿಷ್ಠಾನದವರಿಗೆ ತಾಕೀತು ಮಾಡುವಷ್ಟು!
ಶೋಭಾ ಚಿಪಗೇರಿಯವರು ಸೇವಾ ಭಾರತಿಯಡಿ ಶಾಲೆ ನಡೆಸುತ್ತಿದ್ದಾರೆ. ಆ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚು ಅಂಗ ಕಳೆದುಕೊಂಡವರಿಗೆ ಮಾತ್ರ ಸ್ಥಾನ! ಅಲ್ಲಿಗೆ ಹೋಗಿಬಿಟ್ಟರೆ ಕರುಳು ಕಿತ್ತುಬಂದಂತಾಗುತ್ತೆ. ಇಪ್ಪತ್ತು ವರ್ಷ ವಯಸ್ಸಿನವರೂ ಕೂಡ ಬುದ್ಧಿಮಾಂದ್ಯತೆಯಿಂದಾಗಿ ಎರಡನೇ ತರಗತಿಯ ಮಟ್ಟದಲ್ಲಿರುತ್ತಾರೆ. ಅಂಥವರನ್ನು ಸಂಭಾಳಿಸಿ, ಪಾಠ ಮಾಡುವ ಕಾಯಕ ಅದೆಷ್ಟು ಕಷ್ಟದ್ದು ಯೋಚಿಸಿ. ಅದೊಮ್ಮೆ ಆ ಶಾಲೆಯ ಶಿಕ್ಷಕಿಯೊಬ್ಬರು, ಬ್ರಿಟಿಷರು ಭಾರತಕ್ಕೆ ಬಂದು ಲೂಟಿಗೈದ ಕಥೆಯನ್ನು ಮಕ್ಕಳಿಗೆ ಹೇಳಿದ್ದರು. ಅದಾದ ಕೆಲವೇ ತಿಂಗಳಲ್ಲಿ ಯೂರೋಪಿನ ಸೇವಾ ಸಂಸ್ಥೆಯೊಂದು ಶಾಲೆಯ ಪರಿಶೀಲನೆ ನಡೆಸಿ ವ್ಯಾನ್ ಕೊಡಲು ಬಂದಿತ್ತು. ಆ ವಿಷಯ ಗೊತ್ತಾದೊಡನೆ ಬುದ್ಧಿಮಾಂದ್ಯ ಮಗುವೊಂದು ಶಿಕ್ಷಕಿಯನ್ನು ಅಡ್ಡಹಾಕಿ ಪ್ರಶ್ನಿಸಿತು, ನಮ್ಮನ್ನು ಲೂಟಿ ಮಾಡಿದವರ ಬಳಿ ವ್ಯಾನು ಕೇಳುವುದು ಸರಿಯಾ? ಶಿಕ್ಷಕಿಯದು ಉಸಿರು ಕಟ್ಟುವ ಸರದಿ! ಆ ಮಗುವಿಗೆ ತಿಳಿಹೇಳುವಲ್ಲಿ ಆಕೆ ಸುಸ್ತು. ಬುದ್ಧಿಯೇ ಇಲ್ಲವೆನ್ನುವ ಆ ಮಕ್ಕಳಲ್ಲಿ ಚಿಂತನೆಯ ಬುಗ್ಗೆ ಚಿಮ್ಮಿಸಿದ ಆ ಶಿಕ್ಷಕಿಯರದೆಲ್ಲ ಅದೆಂಥ ಅಸೀಮ ಸಂಕಲ್ಪ ನೋಡಿ!
ನಾವು ಎಲ್ಲ ಇದ್ದ ಮಕ್ಕಳಿಗೆ ರ್‍ಯಾಂಕ್ ಕೊಡಿಸುವ ಶಾಲೆಯ ಎದುರು ನಿಂತು ರೋಮಾಂಚಿತರಾಗುತ್ತೇವೆ. ಈ ಶಾಲೆಗೆ ಹಂಡ್ರೆಡ್ ಪರ್ಸೆಂಟಂತೆ! ಎಂದು ಬೀಗುತ್ತೇವೆ. ಆದರೆ ಯಾರೂ ಇಲ್ಲದ, ಏನೂ ಇಲ್ಲದ ಮಕ್ಕಳಿಗೆ ಬೆಳಕು ತೋರುವ ಈ ಶಾಲೆಗಳ ಬಗ್ಗೆ ಎಂದಾದರೂ ಆಲೋಚಿದ್ದೇವೆಯೇ? ಆ ಶಾಲೆಯ ಕ್ಯಾಂಪಸ್ಸುಗಳಲ್ಲಿ ಅಡ್ಡಾಡಿದ್ದೇವೆಯೇ?
ಕೆಲವರು ಮಾತ್ರ ಅದನ್ನೇ ಬದುಕಾಗಿಸಿಕೊಂಡಿದ್ದಾರೆ. ಅಲಸೂರಿನ ಫಿಲಿಪ್ಸ್ ಟವರ್ ಎದುರಿನ ರಸ್ತೆಯಲ್ಲಿ ’ಮಾರ್ಗದರ್ಶಿ’ ಎಂಬ ಸಂಸ್ಥೆಯೊಂದಿದೆ. ಕೃಷ್ಣಮೂರ್ತಿ ಮತ್ತು ಗೆಳೆಯರು ಸೇರಿ ಕಟ್ಟಿದ್ದರು. ಅಂಗವಿಕಲ ಹೆಣ್ಣು ಮಕ್ಕಳ ಸಾಕುವ ಸಂಸ್ಥೆ ಅದು. ಅಲ್ಲಿ ಮುವ್ವತ್ತೈದು ಜರರಿದ್ದಾರೆ. ಮನೆಯವರಿಗೆ ಹೀನವಾಗಿ, ಅಕ್ಕಪಕ್ಕದವರಿಗೆ ಬೇಡವಾಗಿ ಬದುಕುತ್ತಿದ್ದವರು ಅವರೆಲ್ಲ! ಅಂಥವರಿಗೆ ಊಟ, ವಸತಿ ನೀಡಿ, ರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತಿರುವ ಕೃಷ್ಣಮೂರ್ತಿಯವರ ಸಾಧನೆ ಸಾಮಾನ್ಯವಲ್ಲ. ಸಾಧ್ಯವಾದಲ್ಲೆಲ್ಲ ದಾನಿಗಳನ್ನು ಹುಡುಕಿ, ಸಹಾಯ ಕೇಳಿ, ಬಂದ ಹಣದಿಂದ ಸಂಸ್ಥೆ ಬೆಳೆಸಿ ಇತರರಿಗೂ ಸಹಾಯ ಮಾಡುತ್ತಾರಲ್ಲ ಅದೇ ಅದ್ಭುತ.
ಶಿವಕುಮಾರ್ ಹೊಸಮನಿಯದು ಇನ್ನೊಂದು ಥರ. ಅವರು ಇತರರಂತೆ ’ಮರ ಕಡಿಯಬೇಡಿ’ ಎಂದು ಭಾಷಣ ಬಿಗಿದವರಲ್ಲ. ಪೇಪರ್ ಬಳಕೆ ಕಡಿಮೆಯಾದರೆ ಸಾವಿರಾರು ಮರಗಳು ಉಳಿದಂತೆ ಎನ್ನುತ್ತ ಆ ಕೆಲಸಕ್ಕೆ ಕೈ ಹಾಕಿದರು. ಶಾಲೆಗಳಿಗೆ ಹೋಗಿ ವರ್ಷದ ಕೊನೆಯಲ್ಲಿ ಮಕ್ಕಳ ಬಳಿ ಉಳಿಯುವ ಖಾಲಿ ಹಾಳೆಗಳನ್ನು ಸಂಗ್ರಹಿಸಿ ಅದರಿಂದ ನೋಟ್ ಬುಕ್ ತಯಾರಿಸುತ್ತಾರೆ. ಅದನ್ನು ಬಡ ಮಕ್ಕಳಿಗೆ ಉಚಿತವಾಗಿ ಹಂಚಿಬಿಡುತ್ತಾರೆ! ಒಂದು ಕೋಟಿಯಷ್ಟು ಹಾಳೆ ಸಂಗ್ರಹಿಸುವ ಗುರಿ ಇಟ್ಟಿದ್ದಾರೆ. ಲಕ್ಷಾಂತರ ಮಕ್ಕಳಿಗೆ ನೋಟ್‌ಬುಕ್ ತಲುಪಿಸುವ ಕನಸಿನಲ್ಲಿ ತೇಲುತ್ತಿದ್ದಾರೆ!
ಗುರುತಿದರೆ ಇಂಥವರು ಹತ್ತಾರು ಜನ ನಮ್ಮ ನಡುವೆಯೇ ಸಿಕ್ಕಾರು. ಅವರಿಗೆ ಪ್ರಚಾರ ಬೇಕಿಲ್ಲ. ವೈಭವದ ಬದುಕೂ ಬೇಕಿಲ್ಲ. ಎರಡು ಹೊತ್ತಿನ ಊಟ, ನೆಮ್ಮದಿಯ ಬಾಳು ಅಷ್ಟೇ ಸಾಕು. ಭೂಮಿ ತಾಯಿಯ ಹೊರೆ ಇಳಿದಿರೋದು ಇಂತಹ ಪುಣ್ಯಾತ್ಮರಿಂದಲೇ. ಅವರನ್ನೆಲ್ಲ ಒಮ್ಮೆ ನೋಡಿಬನ್ನಿ. ಅವರು ಮಾಡೋ ಕೆಲಸಗಳತ್ತ ಗಮನಹರಿಸಿ. ಬಯಸಿದ್ದರೆ ನಮ್ಮಂತೆ ಬದುಕಬಹುದಾಗಿದ್ದವರು ಸೇವೆಯ ಯಜ್ಞದಲ್ಲಿ ಸಮಿಧೆsಯಂತೆ ಉರಿಯುವುದೇಕೆ? ಎಂದು ಕೇಳಿಕೊಳ್ಳಿ. ನೀವೂ ಒಂದು ಸಂಕಲ್ಪ ಮಾಡಿ. ಹಣವಿದ್ದರೆ ದಾನ ಮಾಡಿ, ಇಲ್ಲವೇ ರಜಾ ದಿನಗಳಲ್ಲಿ ನಿಮ್ಮ ಸಮಯ ಕೊಡಿ. ಅವಮಾನ ಮಾತ್ರ ಮಾಡಬೇಡಿ. ಸಿರಿವಂತ ಹೆಂಗಸೊಬ್ಬಳು ಅನಾಥ ಹೆಣ್ಣು ಮಕ್ಕಳ ನಿಲಯದ ಮುಖ್ಯಸ್ಥೆಯನ್ನು ಮನೆಗೆ ಕರೆದಿದ್ದರು. ಆಕೆ ಹೋದರೆ ಗೇಟಿನೊಳಕ್ಕೂ ಕರೆಯದೆ ಹರಿದು ಚಿಂದಿಯಾಗಿದ್ದ ಚಪ್ಪಲಿಗಳ ರಾಶಿಯನ್ನು ಗೇಟಿನ ಹೊರಕ್ಕೆ ಎಸೆದಿದ್ದರು. ಸಮಾಜಕ್ಕೆ ಇಂಥ ಸಿರಿವಂತರ ದರ್ದು ಖಂಡಿತ ಇಲ್ಲ. ಬದುಕನ್ನೇ ಸೇವೆಗಾಗಿ ಮುಡಿಪಿಟ್ಟವರ ಜತೆ ಪ್ರೀತಿಯ ನಾಲ್ಕು ಮಾತಾಡಿದರೆ ಸಾಕು, ಅದೇ ಬೆಟ್ಟದಷ್ಟಾಯಿತು. ಹಾಗೆ ಮಾಡಿದ ದಿನ ನಿಮಗೆ ನೆಮ್ಮದಿಯ ನಿದ್ರೆ ಬರದಿದ್ದರೆ ಹೇಳಿ!



~ ಚಕ್ರವರ್ತಿ ಸೂಲಿಬೆಲೆ

Comments Posted (0)