ಅಸ್ಪೃಶ್ಯತೆ ಎಂಬ ಮಾನಸಿಕ ರೋಗ

Posted by ಅರುಂಧತಿ | Posted in | Posted on 1:09 AM

ಅಸ್ಪೃಶ್ಯತೆ ಒಂದು ‘ಮಾನಸಿಕ ರೋಗ’ವಷ್ಟೆ. ನಮ್ಮ ದಮನಕಾರಿ ವ್ಯಕ್ತಿತ್ವದ ಅಭಿವ್ಯಕ್ತಿ ಅದು. ನಮ್ಮ ಹತಾಶೆಯ ಅಭಿವ್ಯಕ್ತಿಯೂ ಹೌದು. ಇದರಿಂದ ಹೊರಬರದ ಹೊರತು ನಾವು ಮಾನಸಿಕ ಅಸ್ವಸ್ಥರಾಗಿಯೇ ಉಳಿದಿರುತ್ತೇವೆ.
-ತುಮಕೂರಿನಲ್ಲಿ ‘ಹಿಂದುತ್ವ ಮತ್ತು ಸಾಮಾಜಿಕ ಸಾಮರಸ್ಯ’ ಕುರಿತ ಪ್ರಬುದ್ಧರ ವಿಚಾರಗೋಷ್ಟಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಮಂಡಿಸಿದ ಪ್ರಬಂಧದ ಆಯ್ದ ಭಾಗ.

‘ಸಾಮರಸ್ಯ’ ಹಿಂದೂ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಪಿಡುಗು. ಹಿಂದೂ ಸಮಾಜ, ಅತ್ಯಂತ ಶ್ರೇಷ್ಠ ಸಮಾಜ. ಇದು ಅತ್ಯಂತ ವಿಶಾಲವಾದುದೂ ಹೌದು. ತನ್ನೊಳಗೇ ಎದ್ದ ಶಿಥಿಲತೆಯ ಅಲೆಗಳನ್ನು ತಳ್ಳುತ್ತ ನಿಷ್ಕಳಂಕವಾಗಿ ಸಾಗಿಬಂದಿರುವ ಧರ್ಮ ಇದು. ಆದರೆ, ಎಲ್ಲೋ ಒಂದೆಡೆ ಅಸ್ಪೃಶ್ಯತೆಯೆಂಬ ಮಹಾಪಾಪ ಹಿಂದೂ ಧರ್ಮಕ್ಕೆರಗಿದ ಅಭಿಶಾಪದಂತೆ ಕಂಡು ಬರುತ್ತಿದೆ.

ಚತುರ್ವರ್ಣಗಳು ಸೃಷ್ಟಿಯಾದದ್ದೇ ಅಸ್ಪೃಸ್ಯತೆಯ ಕಾರಣವಾಯಿತೆ? ಬಹುಶಃ ಇರಲಾರದು. ಗುಣ- ಕರ್ಮಗಳಿಂದ ವಿಭಜಿತವಾದ ಈ ವರ್ಣಗಳು ಅನೇಕತೆಯಲ್ಲಿ ಏಕತೆಯನ್ನು ತಂದವೇ ಹೊರತು ಏಕಸೂತ್ರವಾಗಿದ್ದ ಸಮಾಜವನ್ನು ಅನೇಕವಾಗಿಸಲಿಲ್ಲ. ಆದರೆ, ವರ್ಣಪದ್ಧತಿಯ ಅನುಯಾಯಿಗಳು ಅದನ್ನು ಶಿಥಿಲಗೊಳಿಸುತ್ತ ಸಾಗಿದಂತೆ ಈ ಎಲ್ಲ ಅತಿರೇಕಗಳೂ ಹುಟ್ಟಿಕೊಂಡವು. ಹಾಗಾದಾಗಲೆಲ್ಲ ಬುದ್ಧ -ಬಸವರು, ರಮಣ- ನಾರಾಯಣರು, ಗಾಂಧಿಯಂಥ ಮಹಾತ್ಮರು ಹುಟ್ಟಿಬಂದು ಅದನ್ನು ತಿದ್ದುವ ಯತ್ನ ಮಾಡಿದರು. ಸ್ವಾಮಿ ವಿವೇಕಾನಂದರಂತೂ, ‘ಅಸ್ಪೃಶ್ಯತೆ ಪಾಪವಲ್ಲದಿದ್ದಲ್ಲಿ, ಇನ್ಯಾವುದೂ ಪಾಪವೇ ಅಲ್ಲ’ ಅಂದುಬಿಟ್ಟರು.

ಭಾರತದಲ್ಲಿ ಅಸ್ಪೃಶ್ಯತೆ ಇರಲೇ ಇಲ್ಲವೆಂದರೆ ತಪ್ಪಾದೀತು. ಆದರೆ ಅದು ಬ್ರಿಟಿಷರ ಕಾಲದ ಮತ್ತು ನಂತರದ ಭಾರತದಲ್ಲಿನಷ್ಟು ವ್ಯಾಪಕವಾಗಿರಲಿಲ್ಲ, ಕ್ರೂರವಾಗಿರಲಿಲ್ಲ. ಮಡಿ ಮೈಲಿಗೆಗಳ ಆಚರಣೆ ಇತ್ತಾದರೂ ದೇಶದ ಎಲ್ಲ ಭಾಗಗಳಲ್ಲಿ ನಾವು ಅದನ್ನು ಕಾಣುವುದು ಸಾಧ್ಯವಿರಲಿಲ್ಲ. ಆದರೆ, ಹದಿನೆಂಟನೆಯ ಶತಮಾನದಿಂದೀಚೆಗೆ ಅದು ಹಬ್ಬಿದ ಪರಿ ಮಾತ್ರ ಅತ್ಯಂತ ಆಘಾತಕಾರಿಯಾಗಿತ್ತು. ಅಸ್ಪೃಶ್ಯತೆ ಯಾವ ವೇಗದಲ್ಲಿ ಸಮಾಜವನ್ನೇ ನುಂಗುವಷ್ಟು ವ್ಯಾಪಕವಾಗಿ ಹಬ್ಬಲರಂಭಿಸಿತೋ, ಅದಕ್ಕೆ ಪ್ರತಿಯಾಗಿ ಅದೇ ವೇಗದಲ್ಲಿ ಸಮಾಜ ಸುಧಾರಕರ ಕಾಳಜಿಯಿಂದ ಅದನ್ನು ದಮನ ಮಾಡುವ ಪ್ರಯತ್ನಗಳೂ ನಡೆದವು. ಆದರೆ, ಯಾವೆಲ್ಲ ಪ್ರಯತ್ನದ ನಂತರ ಇನ್ನೇನು ಅಸ್ಪೃಶ್ಯತೆ ಅಳಿದೇ ಹೋಯ್ತು ಎಂದು ಭಾವಿಸಲಾಗಿತ್ತೋ, ಆಗ ಇದ್ದಕ್ಕಿದ್ದ ಹಾಗೆ ಅದು ಮತ್ತೆ ಭುಗಿಲೆದ್ದು ನಿಂತಿದ್ದನ್ನು ನಾವು ನಂತರದ ಇತಿಹಾಸದುದ್ದಕ್ಕೂ ಕಾಣಬಹುದು.
ಇದಕ್ಕೇನು ಕಾರಣ?
ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿ ಧರಮ್ ಪಾಲ್ ಜೀ ತಮ್ಮ ಬ್ಯೂಟಿಫುಲ್ ಟ್ರೀ ಪುಸ್ತಕದಲ್ಲಿ ಸ್ಪಷ್ಟ ದಾಖಲೆಗಳ ಸಹಿತ ವಿವರಿಸಿರುವಂತೆ, ಹದಿನೆಂಟನೇ ಶತಮಾನದ ಆದಿಯಲ್ಲಿ ಭಾರತದಲ್ಲಿ ಸಮಾಜದ ಎಲ್ಲ ವರ್ಗದ ಜನ ಒಟ್ಟಾಗಿ ಶಾಲೆಗೆ ಹೋಗುತ್ತಿದ್ದರು, ಅಧ್ಯಯನ ಮಾಡುತ್ತಿದ್ದರು. ಶಿಕ್ಷಕರಲ್ಲಿಯೂ ಬಹುಪಾಲು ಜನ ಬ್ರಾಹ್ಮಣೇತರರೇ ಆಗಿರುತ್ತಿದ್ದರು.
ಆಂಗ್ಲರು ಬರುವ ಮುನ್ನವಂತೂ ನಮ್ಮಲ್ಲಿ ಅಸ್ಪೃಶ್ಯರ ಸಂಖ್ಯೆಯನ್ನು ನಮೂದಿಸುವ ಪರಿಪಾಠವೇ ಇರಲಿಲ್ಲ. ಅವರನ್ನು ಬೇರೆ ಮಾಡಿ ನೀವು ಇಂಥವರು, ನಿಮ್ಮ ಸಂಖ್ಯೆ ಇಷ್ಟು ಎಂದು ಪ್ರತ್ಯೇಕವಾಗಿಸುವ ಮನೋಭಾವವೇ ಇರಲಿಲ್ಲ! ಇಷ್ಟಕ್ಕೂ ಭಾರತದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದ ಕರಕುಶಲ ಕಲೆಯಿದ್ದದ್ದು, ಭಾರತದ ಚೇತನ ಅಡಗಿದ್ದದ್ದು ಈ ವರ್ಗದ ಜನರಲ್ಲಿಯೇ. ಆದ್ದರಿಂದಲೇ ಬಿಳಿಯರಿಗೆ ಈ ವರ್ಗದ ಜನರನ್ನು ಬೇರ್ಪಡಿಸುವ ಅನಿವಾರ್ಯತೆ ಕಂಡುಬಂದಿದ್ದು. ಈ ಒಡೆದಾಳುವ ನೀತಿಯಿಂದಲೇ ಅವರು ಸುಂದರ ಸಮಾಜವೊಂದನ್ನು ತುಂಡುತುಂಡಾಗಿಸಿದ್ದು.
ಹಾಗೆಂದು, ಬ್ರಿಟಿಷರು ಇಲ್ಲಿದ್ದಷ್ಟೂ ದಿನ ನಮ್ಮಲ್ಲಿ ಉನ್ನತ ವರ್ಗ(ಎಂದು ಕರೆಸಿಕೊಳ್ಳುವ)ದವರೇನೂ ಸ್ಪೃಶ್ಯರಾಗಿರಲಿಲ್ಲ. ಬಿಳಿಯರ ಪಾಲಿಗೆ ಭಾರತದ ಬ್ರಾಹ್ಮಣರೂ ಅಸ್ಪೃಶ್ಯರೇ!

ಮಸ್ಸೂರಿಯ ಬಜಾರಿನಲ್ಲಿ ಎರಡು ರಸ್ತೆಗಳಿವೆ. ಒಂದು ಕೆಳಭಾಗದಲ್ಲಿದ್ದರೆ, ಮತ್ತೊಂದು ಬಜಾರಿಗೆ ಹೊಂದಿಕೊಂಡಂತೆ ಇರುವ ಎತ್ತರದ ರಸ್ತೆ. ಆ ಎತ್ತರದ ರಸ್ತೆಯಲ್ಲಿ ಬ್ರಾಹ್ಮಣನೇ ಆಗಿರಲಿ, ಶೂದ್ರನೇ ಆಗಿರಲಿ, ಯಾವ ಭಾರತೀಯನೂ ನಡೆಯುವಂತಿರಲಿಲ್ಲ. ಪ್ರತಿಯೊಬ್ಬ ಭಾರತೀಯನೂ ಕೆಳರಸ್ತೆಯಿಂದಲೇ ಹಾದುಹೋಗಬೇಕಾಗಿತ್ತು. ಇದು ಮಸ್ಸೂರಿ ಮಾತ್ರವಲ್ಲ, ಬಹುತೇಕ ಇಡಿಯ ರಾಷ್ಟ್ರದ ಕಥೆಯಾಗಿತ್ತು.
ಬಹುಶಃ ಇಂಥ ಶೋಷಣೆಯೇ ಉನ್ನತವರ್ಗದವರು ಕೆಳವರ್ಗದ ಮೇಲೆ ಶೋಷಣೆ ನಡೆಸಿ ಸೇಡು ತೀರಿಸಿಕೊಳ್ಳುವ ಪರಿಪಾಠ ತೀವ್ರವಾಗಿರಬೇಕು.

ಆದರೆ, ಇಂತಹ ಅಧಾರ್ಮಿಕ ಸಂಗತಿಗಳು ನಡೆದಾಗಲೆಲ್ಲ ಅದನ್ನು ಸರಿಪಡಿಸಲು ಮಹಾತ್ಮನೊಬ್ಬ ಮುಂದೆ ಬರುವುದು ಭಾರತದ ವೈಶಿಷ್ಟ್ಯ. ಶ್ರೀ ರಾಮಕೃಷ್ಣ ಪರಮಹಂಸರನ್ನು ಅವರ ಸಾಲಿನಲ್ಲಿ ಮೊದಲನೆಯವರಾಗಿ ಹೆಸರಿಸಬಹುದು. ಅವರಂತೂ ತಮ್ಮ ಉಪನಯನದ ದಿನ ಭಿಕ್ಷೆ ಸ್ವೀಕರಿಸಿದ್ದು ‘ಧನಿ’ ಎಂಬ ಕೆಲಸದಾಕೆಯಿಂದ- ಶೂದ್ರ ಹೆಂಗಸಿನಿಂದ. ಅವರ ಶ್ರೇಷ್ಟ ಶಿಷ್ಯ ವಿವೇಕಾನಂದರು ತಮ್ಮ ಜೀವನದ ಅತ್ಯುನ್ನತ ಬೋಧನೆಯಾಗಿ ನೀಡಿದ್ದು, ಸಾಮರಸ್ಯದ ಚಿಂತನೆಯನ್ನು.

ಎಲ್ಲಕ್ಕಿಂತ ಒಂದು ವಿಷಯವನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ‘ಸಾಮರಸ್ಯ’ ಮತ್ತು ‘ಹೊಂದಾಣಿಕೆ’ ಇವೆರಡೂ ಬೇರೆ ಬೇರೆ ಸಂಗತಿಗಳು. ನಮ್ಮ ಕೆಲಸವಾಗಬೇಕಾದಾಗ ‘ವಿಧಿಯಿಲ್ಲದೆ’ ಮಾಡಿಕೊಂದ ಒಪ್ಪಂದ ಸಾಮರಸ್ಯವಾಗಲಾರದು. ತೋರುಗಾಣಿಕೆಗೆಂದೋ, ಕಾನೂನಿನ ಕಾರಣದಿಂದಲೋ ತೋರಿಸುವ ಗೌರವ ಎಂತಿದ್ದರೂ ಕೃತಕವೇ. ಅದು ಖಂಡಿತ ಮನಸ್ಸುಗಳನ್ನು ಬೆಸೆದು ಸಾಮರಸ್ಯ ಮೂಡಿಸಲಾರದು.
ಹೊಲದಲ್ಲಿ ದುಡಿದು ಬರುವ ಆಳುಗಳಿಗೆ ಹಿತ್ತಿಲಲ್ಲಿ ಕುಳ್ಳಿರಿಸಿ ಊಟ ಹಾಕಿ ಎಲೆ ಎತ್ತುವಂತೆ ಹೇಳುವ, ಮನೆ ಒಳಗಿನವರೆಗೂ ಸಿಲಿಂಡರ್ ತರಿಸಿಕೊಂಡು ಅಡುಗೆ ಮನೆಗೆ ಸೇರಿಸದೆ ಹಾಗೇ ಕಳುಹಿಸಿಬಿಡುವ, ಅಸ್ಪೃಶ್ಯ ಹುಡುಗ ತಂದುಕೊಡುವ ಹಾಲನ್ನು ಕುಡಿಯುತ್ತಲೇ ಆತನನ್ನು ಮುಟ್ಟಲು ಹಿಂದೇಟು ಹಾಕುವ, ಹಜಾಮತಿನ ನಂತರ ‘ಮೈಲಿಗೆ’ ಯ ಕಾರಣವೊಡ್ಡಿ ಸ್ನಾನ ಮಾಡುವ ಜನರನ್ನು ಕಂಡರೆ ನನಗಂತೂ ಅಸಹ್ಯವಾಗುತ್ತದೆ.
ಹಿಂದೂ ಧರ್ಮದಲ್ಲಿ ಯಾವ ವರ್ಗವನ್ನೂ ‘ಅಸ್ಪೃಶ್ಯ’ ಎಂದು ನಿರ್ದೇಶಿಸಿಲ್ಲ. ಹಾಗೊಂದು ವೇಳೆ ನಾವು ಯಾರನ್ನಾದರೂ ಹಾಗೆ ಕರೆದರೆ, ಸ್ವತಃ ನಾವೇ ಧರ್ಮಭ್ರಷ್ಟರೆಂದರ್ಥ!

ಅಸ್ಪೃಶ್ಯತೆ ಒಂದು ‘ಮಾನಸಿಕ ರೋಗ’ವಷ್ಟೆ. ನಮ್ಮ ದಮನಕಾರಿ ವ್ಯಕ್ತಿತ್ವದ ಅಭಿವ್ಯಕ್ತಿ ಅದು. ನಮ್ಮ ಹತಾಶೆಯ ಅಭಿವ್ಯಕ್ತಿಯೂ ಹೌದು. ಇದರಿಂದ ಹೊರಬರದ ಹೊರತು ನಾವು ಮಾನಸಿಕ ಅಸ್ವಸ್ಥರಾಗಿಯೇ ಉಳಿದಿರುತ್ತೇವೆ.

ನಾವೆಲ್ಲ ನೆನಪಿಡಬೇಕಾದ ಸಂಗತಿಯೊಂದಿದೆ. ಹಿಂದೂ ಧರ್ಮ ಉಳಿದಿರೋದು ಮೇಲ್ವರ್ಗದ ಜನರ ಕಾರಣದಿಂದಲ್ಲ. ಪ್ರತಿ ಬಾರಿ ಅನ್ಯ ದೇಶೀಯರ- ಅನ್ಯ ಧರ್ಮೀಯರ ಆಕ್ರಮಣವಾದಾಗಲೂ ಅವರು ಕೈಹಾಕಿದ್ದು ಹಿಂದೂ ಧರ್ಮದ ಬೇರು ಎನಿಸಿಕೊಂಡಿದ್ದ ಕೆಳವರ್ಗದತ್ತಲೇ ಹೊರತು ಮೇಲ್ವರ್ಗದ ಮೇಲಲ್ಲ. ಮೊಘಲರ ಕಾಲದಲ್ಲಿ, ‘ಮತಾಂತರಗೊಳ್ಳಿ, ಇಲ್ಲವೇ ನಮ್ಮ ಅಂತಃಪುರದ ಪಾಯಿಖಾನೆಯ ಮಲ ಹೊರಿ’ ಎಂಬ ಆಯ್ಕೆ ಎದುರಾದಾಗ ಮಲ ಹೊರುವುದನ್ನೇ ಆಯ್ದುಕೊಂಡು ಹಿಂದೂಗಳಾಗಿ ಉಳಿದ ಜನ ಅವರು! ಇವತ್ತು ಹಿಂದೂ ಧರ್ಮ ಉಳಿದಿದ್ದರೆ, ಅದು ಇಂಥ ಕೋಟಿ ಕೋಟಿ ಜನರ ಕಾರಣದಿಂದ. ಅಂಥವರನ್ನೆ ಕೀಳೆಂದು ಜರಿದು ಹೊರಗಿಡುವ ಮನಸ್ಸು ಅದಿನ್ನೆಷ್ಟು ವಿಕೃತ ಎಂದು ಒಮ್ಮೆ ಯೋಚಿಸಿ.

~ ಚಕ್ರವರ್ತಿ ಸೂಲಿಬೆಲೆ

Comments Posted (0)