ಭಯೋತ್ಪಾದನಾ ನಿಗ್ರಹ- ಕೆಲವು ವೈಫಲ್ಯಗಳು

Posted by ಅರುಂಧತಿ | Posted in | Posted on 7:00 AM

ಮತ್ತೊಂದು ಮಾಯದ ಗಾಯ!
ಸುಖಾಂತ್ಯವಾಯ್ತೆಂದು ಬೀಗಿದ್ದಷ್ಟೆ ಬಂತು. ಸತ್ಯ ಹೇಳಿ. ಒಂಭತ್ತು ಉಗ್ರಗಾಮಿಗಳನ್ನು ಕೊಲ್ಲಲು ೬೨ ಗಂಟೆಗಳಷ್ಟು ದೀರ್ಘ ಕಾಲ ಸವೆಸಿದ್ದನ್ನು (ಅದೂ ಭಾರತದ ಪ್ರಮುಖ ನಗರಿ ಮುಂಬಯ್ ನೊಳಗೆ) ಯಾರಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದೇನು?
ಧಿಕ್ಕಾರವಿರಲಿ ಸರ್ಕಾರಗಳಿಗೆ!
ಧಿಕ್ಕಾರವಿರಲಿ ನಮ್ಮ ರಕ್ಷಣಾ ಪಡೆಗಳಿಗೆ!!

ಮೊದಲನೆಯದೇನೋ ಸರಿ. ಈ ಎರಡನೆಯದೇಕೆ ಎನ್ನುವಿರೇನೋ?
ಹೌದು. ಆ ಸಾಲು ಬರೆಯಬೇಕಾದರೆ ನನಗೂ ವಿಪರೀತ ನೋವಿದೆ. ಆದರೆ ಬರೆಯದೇ ವಿಧಿಯಿಲ್ಲ. ಕಾದಾಟದಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಅರ್ಪಿಸುವ ಭರದಲ್ಲಿ ಆದದ್ದನ್ನು ಮರೆತುಬಿಟ್ಟರೆ… ಮುಂದಿನ ವರ್ಷ ಮತ್ತೊಂದಷ್ಟು ಜನರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾದೀತು.

ನಮ್ಮ ಪೋಲಿಸ್ ಪಡೆ, ವಿಶೇಷ ದಳಗಳು ಮತ್ತು ಕಮಾಡೋಗಳ ನಡುವೆ ಹೊಂದಣಿಕೆ ಇಲ್ಲ ಎಂಬುದು ಮೊದಲಿಂದ ಗೊತ್ತಿದ್ದರೂ ಈಗ ಅದು ಸ್ಪಷ್ಟವಾಗಿ ಸಾಬೀತಾಯ್ತು. ಪ್ರತಿಯೊಬ್ಬರಿಗೂ ನಾವು ಮೇಲ್ಮಟ್ಟದವರೆನ್ನುವ ಹಮ್ಮು. ಗೆಲುವಿನ ಸಹಿ ತಮ್ಮಿಂದಲೇ ಬರೆಯಲ್ಪಡಬೇಕೆನ್ನುವ ಆತುರ. ಹೀಗಗಿ ಒಳಹೊಕ್ಕ ಉಗ್ರರೆಷ್ಟು? ಅಡಗಿರುವ ತಾಣಗಳಾವುವು? ತಾಜ್ ನ ಕಟ್ಟಡ ಹೇಗಿದೆ? ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಪ್ರತಿದಾಳಿ ಶುರುವಿಟ್ಟರು.
ಉಗ್ರ ನಿಗ್ರಹಕ್ಕೆಂದೇ ರಚನೆಯಾದ ದಳವೊಂದು ಎಷ್ಟು ಬೆಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆಯೆಂದರೆ, ಒಬ್ಬ ಉಗ್ರನ ಕೈಲಿ ಮೂವರು ಪ್ರಮುಖ ಅಧಿಕಾರಿಗಳು ಕೊಲೆಯಾಗುವಷ್ಟು!
‘ಉಗ್ರ ನಿಗ್ರಹ ದಳ’ವೆಂದರೆ ಸಾಮಾನ್ಯ ಪೋಲಿಸರೆಂದು ಭಾವಿಸಬೇಡಿ. ಅವರಿಗೆ ಉಗ್ರರ ಮನಸ್ಥಿತಿಯ ಪರಿಚಯ ಮಾಡಿಕೊಡಲಾಗಿರುತ್ತದೆ. ಅವರ ಹೋರಾಟದ ಹೆಜ್ಜೆಗಳ ಅರಿವು ಮೂಡಿಸಲಾಗಿರುತ್ತದೆ. ಪ್ರತಿಯೊಬ್ಬನ ಶಕ್ತಿ ಸಾಮರ್ಥ್ಯಗಳ ಅಂದಾಜು ತಿಳಿಸಲಾಗಿರುತ್ತದೆ. ಜೊತೆಗೆ, ಗುಪ್ತಚರ ಇಲಾಖೆಗಳೊಂದಿಗೆ ಸಂಪರ್ಕ ಕೊಡಿಸಿ ಒಳಗಿನ ಶತ್ರುಗಳ ಬಗ್ಗೆಯೂ ವಿವರ ನೀಡಲಾಗಿರುತ್ತದೆ.
ಇಷ್ಟೆಲ್ಲಾ ಇದ್ದರೂ ಅತಿ ವಿಶ್ವಾಸದೊಂದಿಗೆ ಹೊರಟು ಬಲಿಯಾಗಿಬಿಟ್ಟರಲ್ಲ… ಸರಿಯಾ? ಬಹುಶಃ ಅವರು ತಮಗಿಂತ ಕೆಳಮಟ್ಟದ ಪೋಲಿಸರೊಂದಿಗೆ ಸಮನ್ವಯವನ್ನೇ ಸಾಧಿಸಿರಲಿಲ್ಲವೆನಿಸುತ್ತದೆ. ಅವರ ಸಮನ್ವಯತೆಯೇನಿದ್ದರೂ ಮುಖ್ಯಮಂತ್ರಿ, ಪಿ.ಎಂ, ಸೂಪರ್ ಪಿ.ಎಂ.ಗಳೊಂದಿಗೆ. ಇಲ್ಲವಾದರೆ, ಪ್ರಜ್ಞಾ ಸಿಂಗಳನ್ನು ಬಂಧಿಸುವಲ್ಲಿ ಖರ್ಚು ಮಾಡಿದ ಬುದ್ಧಿಮತ್ತೆಯ ಹತ್ತನೇ ಒಂದು ಭಾಗದಷ್ಟಾದರೂ ಖರ್ಚು ಮಾಡಿದ್ದರೆ ಸಾಕಿತ್ತು. ಉಗ್ರರನ್ನು ಬಡಿಯುವುದು ಅಷ್ಟೊಂದು ಕಷ್ಟವಾಗುತ್ತಿರಲಿಲ್ಲ.

ಖಂಡಿತ. ಹೋರಾಡುತ್ತ ಮಡಿದವರ ಬಗ್ಗೆ ನನಗೆ ನೋವಿದೆ. ಗೌರವವಿದೆ. ಆದರೆ ಅವರನ್ನು ಉಗ್ರ ನಿಗ್ರಹಕ್ಕೆಂದು ನಿಯೋಜಿಸಿರುವುದು ಪ್ರಾಣ ಕೊಡಲಿಕ್ಕಲ್ಲ, ಪ್ರಾಣ ತೆಗೆಯಲಿಕ್ಕೆ. ಗಡಿ ಭಾಗದ ಸೈನಿಕನ ಸಾವಿಗೂ ಭಾರತದೊಳಗಿನ ಈ ವೀರರ ಸಾವಿಗೂ ಖಂಡಿತ ಸಮ್ಯವಿಲ್ಲ. ಅಲ್ಲಿ ಎದುರಾಳಿಯಾದವನು ತನ್ನದೇ ಆದ ಆಯಕಟ್ಟಿನ ಜಾಗದಲ್ಲಿ ನಿಂತಿರುತ್ತಾನೆ. ಅವನ ಶಕ್ತಿಯ ಅರಿವು ನಮ್ಮ ಸೈನಿಕರಿಗಿರುವುದಿಲ್ಲ. ಇಲ್ಲಿ, ಆಯಕಟ್ಟು ನಮ್ಮದು. ಸಾಮರ್ಥ್ಯವೂ ನಮ್ಮದೇ. ಅದರೂ ಫಲಿತಾಂಶ ಹೀಗಗಿಬಿಡುತ್ತದೆ.

ಏಕೆ ಗೊತ್ತೆ? ಇವರಿಗೆಲ್ಲ ದೇಶ ರಕ್ಷಣೆಗಿಂತ, ಕುರ್ಚಿಯ ಮೇಲೆ ಕುಳಿತ ನಾಯಕನ ರಕ್ಷಣೆಯ ಜರೂರತ್ತಿದೆ. ಇಲ್ಲವಾದರೆ, ಒಳ ಬಂದ ಉಗ್ರನ ಕೈಲಿರುವ ಕೇಸರಿ ದಾರ ನೋಡಿ ‘ಹಿಂದೂ ಉಗ್ರ’ ಎಂದು ಸಾಧಿಸಿಬಿಡುವ ಹಟಕ್ಕೆ ನಮ್ಮ ರಕ್ಷಣಾ ಇಲಾಖೆ ಬೀಳುತ್ತಿರಲಿಲ್ಲ.
ಬಿಡಿ. ಅವರ ಬಗ್ಗೆ ಇನ್ನು ಮಾತಾಡಿ ಪ್ರಯೋಜನವೇ ಇಲ್ಲ. ಅಕಸ್ಮಾತ್ ಹೀಗೆ ಒಳಗೆ ಬಂದಿರುವವರು ನಿಜವಾಗಿಯೂ ಹಿಂದೂ ಉಗ್ರನಾಗಿದ್ದಿದ್ದರೆ ಏನಾಗಿರುತ್ತಿತ್ತು? ಮಾಧ್ಯಮಗಳೆಲ್ಲ ಹಿಂದೂಗಳ ವಿರುದ್ಧ ತಿರುಗಿಬಿದ್ದಿರುತ್ತಿದ್ದವು. ಅನಂತಮೂರ್ತಿ, ಕಾರ್ನಾಡ್, ಗೌರಿ ಲಂಕೇಶರೆಲ್ಲ ಬೊಂಬಡಾ ಬಜಾಯಿಸಿಬಿಟ್ಟಿರುತ್ತಿದ್ದರು. ನಾವು, ನೀವು ಮುಖ ಎತ್ತಿಕೊಂಡು ರಸ್ತೆಗಿಳಿಯುವಂತಿರಲಿಲ್ಲ. ಇದೇ ಉಗ್ರ ನಿಗ್ರಹ ದಳದ ಸಿಬ್ಬಂದಿ ಆ ತಂಡದ ಅಷ್ಟೂ ಜನರನ್ನು ಹಿಡಿದು, ಹಿಂಸಿಸಿ, ಪ್ರತಿನಿತ್ಯ ಹೇಳಿಕೆಗಳನ್ನು, ಅವರಿಂದ ಪಡೆದ ಮಾಹಿತಿಗಳನ್ನು ಪತ್ರಿಕೆಗಳಿಗೆ ಬಹಿರಂಗಪಡಿಸುತ್ತಿತ್ತು. ವಾಸ್ತವವಾಗಿ ಹಾಗೆ ಮಾಡಬಾರದೆಂಬ ನಿಯಮವಿದೆ. ಆದರೆ ಪ್ರಜ್ಞಾ ಸಿಂಗಳ ವಿಚಾರದಲ್ಲಿ, ಪ್ರತಿನಿತ್ಯ ಪತ್ರಿಕೆಗಳ ಮುಖಪುಟದಲ್ಲಿ ವಿಚಾರಣೆಯ ವಿವರ ಬರುತ್ತಿತ್ತಲ್ಲ? ‘ಹಿಂದೂ’ಉಗ್ರಗಾಮಿ ಎಂದು ಸಾಬೀತುಪಡಿಸುವ ಯತ್ನ ನಡೆಯುತ್ತಿತ್ತಲ್ಲ? ಇದರಲ್ಲಿ ಕರ್ಕರೆ ಅವರ ಕೈವಡವಿತ್ತಾ? ಕೆಳೋಣವೆಂದರೆ, ಅವರು ಬದುಕಿಲ್ಲ. ಹೋಗಲಿ, ಸಾಧ್ವಿಯ ಕಿಡ್ನಿಗೆ ಏಟುಬೀಳುವಂತೆ ಅವಳನ್ನು ಬಡಿದಿದ್ದಾರಲ್ಲ, ಅದರ ಬಗ್ಗೆ ಅವರಿಗೆ ಗೊತ್ತಿತ್ತಾ? ಅದೂ ಗೊತ್ತಿಲ್ಲ.

ಇನ್ನು ಹೇಳುವುದೇನಿಲ್ಲ. ನಮ್ಮ ರಕ್ಷಣೆಗೆಂದು ನಿಯೋಜಿತರಾದವರ ರಕ್ಷಣೆ ನಾವೇ ಮಾಡಬೇಕಾ? ಅಷ್ಟಾದರೂ ಹೇಳಿಬಿಟ್ಟರೆ ನಾವೇ ಒಂದು ಪಡೆಕಟ್ಟಿ, ಒಂದು ಕೈ ನೋಡಬಹುದು. ಇಷ್ಟಕ್ಕೂ ದೇಶ ರಕ್ಷಣೆಯ ಹೊಣೆ ನಮ್ಮೆಲ್ಲರಿಗೂ ಇದೆಯಲ್ಲವೇ? ಬಹುಶಃ ನಾವೂ ನೀವೂ ಬಂದೂಕು ಕೈಲಿ ಹಿಡಿದು ಹೋರಾಡುವ ಕಾಲ ಹತ್ತಿರ ಬಂದಿದೆ.
Be alert… Be ready.

Comments Posted (0)