ರಾಷ್ಟ್ರೀಯತೆ ಏನಾಯಿತು!?

Posted by ಅರುಂಧತಿ | Posted in | Posted on 1:10 AM

ರಾಷ್ಟ್ರೀಯತೆ ಒಬ್ಬ ವ್ಯಕ್ತಿ ಹೊಂದಿಕೊಂಡಿರುವ ಭೌಗೋಳಿಕತೆ, ಸಂಸ್ಕೃತಿ, ಅಲ್ಲಿನ ಜನ ಜೀವನ, ನಾಗರಿಕತೆಗಳಿಗೆ ಸಂಬಂಧಪಟಿರುವಂಥದ್ದು. ಆ ವ್ಯಕ್ತಿ ಈ ನೆಲ, ಈ ಜಲ ‘ನನ್ನದು’ ಎಂದು ಹೇಳುವಾಗ ಹೆಮ್ಮೆಯಿಂದ ಬೀಗುವುದಿದೆಯಲ್ಲ, ಅದೇ ರಾಷ್ಟ್ರೀಯತೆಯ ಉತ್ಕೃಷ್ಟ ಉದಾಹರಣೆ ಎಂದರೆ ತಪ್ಪಲ್ಲ. ಪ್ರತಿಯೊಂದು ದೇಶದ ಪ್ರಜೆಗೂ ಆಯಾ ದೇಶದ ಬಗೆಗೆ ಉನ್ನತ ಗೌರವ ಭಾವನೆ, ನಿಷ್ಠೆ ಇದ್ದೇಇರುತ್ತದೆ, ಇರಲೇಬೇಕು.
ನಮ್ಮ ಪಾಲಿಗೆ ‘ನಾನು ಭಾರತೀಯ’ ಎನ್ನುವುದೇ ರಾಷ್ಟ್ರೀಯತೆ. ಇಲ್ಲಿನ ಪ್ರತಿಯೊಂದೂ ನಮಗೆ ಸ್ವರ್ಗ ಸಮಾನ. ಇಲ್ಲಿನ ಇತಿಹಾಸ, ಕಲೆ, ಸಾಹಿತ್ಯ, ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಳು ಎಲ್ಲವೂ ನಮಗೆ ಶ್ರೇಷ್ಟವೇ. ಆದರೆ ಇದು ಅಂಧಾಭಿಮಾನವಲ್ಲ. ಇಡಿಯ ಜಗತ್ತಿನ ಈವರೆಗಿನ ಇತಿಹಾಸದಲ್ಲಿ ಅನ್ಯ ಧರ್ಮಗಳ ಮೇಲೆ ಅತ್ಯಾಚಾರ ಮಾಡದ, ಅನ್ಯ ರಾಷ್ಟ್ರಗಳನ್ನು ಅತಿಕ್ರಮಣ ಮಾಡದ ಪರಿಶುದ್ಧ ಇತಿಹಾಸ ನಮ್ಮದು. ತಾವು ಕಾಡಿನೊಳಗೆ ಉಪವಾಸವಿದ್ದು ಹೊರಗಿನ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಋಷಿಗಳು, ದ್ರಷ್ಟಾರರು ನಮ್ಮವರೆನ್ನುವ ಹೆಮ್ಮೆ ನಮ್ಮದು.

ಆದರೆ… ಈ ಹೆಮ್ಮೆ ನಮ್ಮಲ್ಲಿ ಎಷ್ಟು ಜನರಿಗೆ ಇದೆ? ನಮ್ಮ ಯುವ ಜನರ ರಾಷ್ಟ್ರೀಯ ಪ್ರಜ್ಞೆ ಕೇವಲ ಕ್ರಿಕೆಟಿಗೆ ಸೀಮಿತವಾಗಿಬಿಟ್ಟಿದೆಯೇ? ರಾಷ್ಟ್ರೀಯತೆ ಅನ್ನುವುದು ಯಾವುದೋ ಒಂದು ಧರ್ಮದ, ಸಂಘಟನೆಯ ತಲೆನೋವು ಎನ್ನುವ ಭಾವನೆ ಮೂಡತೊಡಗಿದ್ದು ಯಾವಾಗ? ಯಾವ ಕಾರಣದಿಂದ ಇಂದು ಸಿಮಿ ಯಂಥ ವಿದ್ಯಾರ್ಥಿ ಸಂಘಟನೆ ದೇಶದ ಹಿತವನ್ನು ಮರೆತು ವಿದೇಶೀಯ ಭಯೋತ್ಪಾದಕರಿಗೆ ಆಶ್ರಯ ಕೊಡುತ್ತಾ ಅವರ ಕುಕೃತ್ಯಗಳಲ್ಲಿ ಪಾಲುದಾರನಾಗುತ್ತಿರುವುದೇಕೆ? ಧರ್ಮ ರಾಷ್ಟ್ರನಿಷ್ಟೆಯನ್ನು ಬದಲಾಯಿಸುತ್ತದೆಯೆನ್ನುವ ಮಾತು ನಿಜವೇ? ನಾಗಾಲ್ಯಾಂಡಿನಲ್ಲಿ ‘ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಬೋರ್ಡು ಯಾಕಿದೆ? ಪ್ರತ್ಯೇಕತಾವಾದಿಗಳೊಡನೆ ಕದನ ವಿರಾಮ ಘೋಷಣೆಗೂ ರಕ್ಷಣಾ ಸಚಿವರು ಪಾದ್ರಿಯ ಜೊತೆ ಒಪ್ಪಂದದ ಮಾತನಾಡಬೇಕಾಗಿ ಬರುತ್ತದಲ್ಲಾ, ಯಾಕೆ? ಇವತ್ತಿಗೂ ಸ್ವಾತಂತ್ರ್ಯೋತ್ಸವದ ದಿನ ಕೆಲವು ಏರಿಯಾಗಳಲ್ಲಿ ಹಸಿರು ಧ್ವಜ ಹಾರುವುದೇಕೆ? ಯಾಕೆ ಕೋಟಿಗಟ್ಟಲೆ ಹಣದ ಅಡಮಾನದ ನಂತರವಷ್ಟೇ ಅಮರನಾಥ ದೇಗುಲಕ್ಕೆ ಭೂಮಿಯನ್ನು ತಾತ್ಕಾಲಿಕವಾಗಿ ಕೊಟ್ಟರೂ ಸಮಾಜ ಬಾಂಧವರು ಪ್ರತಿಭಟನೆ ನಡೆಸುತ್ತಿದ್ದಾರೆ? ವಂಚಕ ನೆರೆದೇಶ ಪಾಕಿಸ್ತಾನ ಅತಿಕ್ರಮಣದಿಂದ ಕಾಶ್ಮೀರದ ಭಾಗವೊಂದನ್ನು ಕಿತ್ತುಕೊಂಡು ಚೀನಾ ಸೇನೆಗೆ ಉಡುಗೊರೆಯಾಗಿ ನೀಡಿತಲ್ಲ, ಆಗ ಯಾಕೆ ಈ ಜನರ ಕಣ್ಣುರಿಯಲಿಲ್ಲ? ಎಲ್ಲಿದೆ ರಾಷ್ಟ್ರೀಯತೆ?

ಪ್ರಶ್ನೆಗಳು ಸಾಕಷ್ಟಿದೆ.
ಇದನ್ನು ನಾವೆಲ್ಲ ಸೇರಿ ಚರ್ಚಿಸಬಹುದೇ?

Comments Posted (0)