ಔಷಧ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಜೀವಗಳು…

Posted by ಅರುಂಧತಿ | Posted in | Posted on 7:09 AM

ವೈದ್ಯಕೀಯ ಜಗತ್ತು ಇತ್ತೀಚೆಗೆ ಅತ್ಯಂತ ದುಬಾರಿ ಜಗತ್ತಾಗಿದೆ ಅಂತ ಅನ್ನಿಸ್ತಿಲ್ವಾ? ಕೈಕಾಲು ಮುರಿದುಕೊಂಡೋ, ಎದೆ ನೋವು ಅಂತಲೋ, ಕಣ್ಣು ನೋವು ಅಂತಲೋ ಆಸ್ಪತ್ರೆಗೆ ಹೋಗಿ ನೋಡಿ, ಹತ್ತಿಪ್ಪತ್ತು ಸಾವಿರದ ಕಮ್ಮಿ ಕೈಬಿಡದೆ ನೀವು ಹೊರಗೆ ಬಂದರೆ ಆಮೇಲೆ ಹೇಳಿ! ಹೋಗಲಿ, ಇಷ್ಟಾದರೂ ನಮ್ಮ ಸಮಸ್ಯೆ ಬಗೆ ಹರಿದಿರುತ್ತಾ? ಹೊಟ್ಟೆ ನೋವು ಅಂತ ಹೋದವರು ಅಪೆಂಡಿಸೈಟಿಸ್ಸನ್ನೋ, ಹರ್ನಿಯಾವನ್ನೋ ಹೊತ್ತು ತಂದಿರುತ್ತಾರೆ. ಇನ್ನು ದೊಡ್ಡ ದೊಡ್ಡ ಖಾಯಿಲೆಗಳ ಹೆಸರನ್ನೇ ಹೇಳಿಕೊಂಡು ಒಳಹೊಕ್ಕವರ ಪಾಡು ಕೇಳುವುದಂತೂ ಬೇಡ! ಆದರೆ ಕೆಲವು ಬಾರಿ ಪೂರಾ ಅದಕ್ಕೆ ವಿರುದ್ಧ. ಅಸಲು ದೊಡ್ಡ ಖಾಯಿಲೆಯಿದ್ದವರೂ ’ಜ್ವರ’, ’ಇನ್ಫೆಕ್ಷನ್’ ಇತ್ಯಾದಿ ಉಡಾಫೆಯ ರಿಪೋರ್ಟ್ ಹಿಡಿದು ಹೊರಬರುತ್ತಾರೆ!!ನಾವು ’ಗರ್ವ’ ಪತ್ರಿಕೆಯನ್ನು (ಆಮೇಲಿನದ್ದಲ್ಲ, ಆರಂಭದ ಗರ್ವ) ನಡೆಸುತ್ತಿದ್ದಾಗ ಮಧು ಅನ್ನೋ ಶೃಂಗೇರಿಯ ಹುಡುಗ ನಮ್ಮೊಂದಿಗಿದ್ದ. ಆಗ ತಾನೇ ಇಪ್ಪತ್ತು ದಾಟಿದ್ದವ. ಆಗಾಗ ಜ್ವರ ಬಂದು ಹೋಗುತ್ತಿತ್ತು. ಆರಂಭದಲ್ಲಿ ಡಾಕ್ಟರುಗಳು “ಜ್ವರ ಅಷ್ಟೇ” ಅಂದು ಮಾತ್ರೆ- ಇಂಜೆಕ್ಷನ್ನುಗಳಲ್ಲೇ ಪೂರೈಸಿದ್ದರು. ಹೀಗೆ ವೈದ್ಯರಿಂದ ವೈದ್ಯರಿಗೆ ಅಲೆದಲೆದು ಕೊನೆಗೆ ಒಂದಷ್ಟು ಪರೀಕ್ಷೆಗಳ ನಂತರ ಅದು ಬ್ಲಡ್ ಕ್ಯಾನ್ಸರ್ ಅಂತ ಗೊತ್ತಾಯ್ತು. ಆಪರೇಷನ್ ಖರ್ಚು ಎರಡು ಲಕ್ಷ! ಬಡವರ ಮನೆ ಹುಡುಗ ಮಧು. ಹಣ ಎಲ್ಲಿಂದ ಬರಬೇಕು? ಹೋಗಲಿ ಕಷ್ಟಪಟ್ಟು ಹೊಂದಿಸಿಕೊಟ್ರೆ ಅವನು ಉಳ್ಕೊಳ್ತಾನಾ? ಹಾಗಂತ ಕೇಳಿದ್ರೆ ಡಾಕ್ಟ್ರು ಮೇಲೆ ನೋಡಿ, ಫಿಫ್ಟಿ ಪರ್ಸೆಂಟ್ ಗ್ಯಾರೆಂಟಿ ಕೊಡಬಹುದಷ್ಟೇ ಅಂದುಬಿಟ್ರು. ಅವರ ಖಾತ್ರಿ ಇದ್ದುದು ಸಾವಿನದ್ದೋ ಬದುಕಿನದ್ದೋ ಗೊತ್ತಾಗಲಿಲ್ಲ. ಮಧು ಊರಿಗೆ ಹೋದ. ಅದು ಹೇಗೋ ತನಗಿದ್ದ ರೋಗದ ಬಗ್ಗೆ ತಿಳಿಯಿತು. ನಡುವಿನೊಂದು ದಿನ ತಣ್ಣಗೆ ಎಲ್ಲರನ್ನೂ ಬಿಟ್ಟು ನಡೆದುಬಿಟ್ಟ.
home-focus.jpg
ಅವನದ್ದು ಹೀಗಾದರೆ, ನನಗೆ ಪಾಠ ಮಾಡಿದ ಉಪಾಧ್ಯಾಯರೊಬ್ಬರದು ಮತ್ತೊಂದು ರೀತಿಯದು. ಇಳಿ ವಯಸ್ಸಿನಲ್ಲಿ ಎದೆನೋವೆಂದು ಮಲ್ಯ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಯ ವೈದ್ಯರು ಹೃದಯದ ನಾಳಗಳಗಳಲ್ಲಿ ಕೊಬ್ಬು ಶೇಖರವಾಗಿದೆಯೆಂದು ಆಂಜಿಯೋಪ್ಲಾಸ್ಟ್ ಎಂಬ ಚಿಕಿತ್ಸೆ ಮಾಡಿದರು. ಎರಡೇ ದಿನ. ಆಂಜಿಯೋಪ್ಲಾಸ್ಟ್ ನಿಂದ ಪರಿಣಾಮವಾಗಲಿಲ್ಲವೆಂದು ಬೈಪಾಸ್ ಸರ್ಜರಿಗೆ ಸಲಹೆ ನೀಡಿದರು. ವೈದ್ಯನಿಗೂ ನಾರಾಯಣಾನಿಗೂ ವ್ಯತ್ಯಾಸವೇ ಇಲ್ಲವಲ್ಲ? ಎಲ್ಲರೂ ಸರಿ ಅಂದರು. ನೋಡ ನೋಡುತ್ತಲೇ ಅದೂ ಆಯಿತು. ರೋಗಿಗೂ ಅರಾಮಾದ ಅನುಭವ.
ಮತ್ತೆ, ಎರಡೇ ದಿನ. ಇದ್ದಕ್ಕಿದ್ದ ಹಾಗೇ ಬಿಕ್ಕಳಿಕೆ ಶುರುವಾಯ್ತು. ಯಾವ ಪರಿ ಬಿಕ್ಕಳಿಕೆ ಅಂದರೆ, ಅದನ್ನು ಕೇಳಿದವರು ಕೂಡ ಎದೆ ಹಿಂಡಿದಂತಾಗಿ ಕಣ್ಣಿರು ಮಿಡಿಯುವಂತಿತ್ತು. ಮೂರು ದಿನಗಳಾ ಕಾಲ ಅದು ಎಡಬಿಡದೆ ಕಾಡಿತು.
ಮತ್ತೆ ಆಸ್ಪತ್ರೆಗೆ ಓಟ. ಮೊದಮೊದಲು ಅರಿವಳಿಕೆ ಮದ್ದಿನ ಪ್ರಭಾವದಿಂದ ಹಾಗಾಗಿದೆ ಅಂದರು. ಆಮೇಲೆ ಸೋಂಕು ತಗಲಿ ಹೊಟ್ಟೆಯಲ್ಲಿ ಹುಣ್ಣಾಗಿದೆ ಅಂದರು. ಕೊನೆಗೆ ಐ ಸಿ ಯು ನಲ್ಲಿಟ್ಟು ಯಾರನ್ನೂ ಹತ್ತಿರಕ್ಕೆ ಬಿಡದಾದರು. ಈವರೆಗಿನ ಚಿಕಿತ್ಸೆಗಳ ಖರ್ಚು ಅದಾಗಲೇ ಮೂರು ಲಕ್ಷ ದಾಟಿದೆ! ನಮ್ಮ ಗುರುಗಳು ಆರೋಗ್ಯವಿರಲಿ, ಜೀವ ಸಹಿತ ಹಿಂದಿರುಗಿದರೆ ಸಾಕು ಎಂದು ಮೊರೆ ಇಡುವ ಸ್ಥಿತಿ ನಮ್ಮದು.
ಇದು ಆಸ್ಪ್ತ್ರೆಗಳಾ ದೋಷವೋ, ವೈದ್ಯರ ದೋಷವೋ, ದುಡ್ಡಿನ ಆಟವೋ? ಒಂದೂ ತಿಳಿಯದು. ಎರಡು ವರ್ಷಗಳ ಹಿಂದೆ ನಾರಾಯಣ ಹೃದಯಾಲಯದಲ್ಲಿಯೂ ಇಂಥದ್ದೇ ಒಂದು ಘಟನೆ ನಡೆಯಿತು. ರಾಮಕೃಷ್ಣಾಶ್ರಮದ ಸಾಧುಗಳಾದ ಪುರುಷೋತ್ತಮಾನಂದ ಜೀ ಅವರನ್ನು ಎದೆ ನೋವೆಂದು ಅಲ್ಲಿ ದಾಖಲು ಮಾಡಲಾಗಿತ್ತು. “ಹೃದಯದಲ್ಲಿ ತೊಂದರೆ ಇತ್ತು. ಈಗ ನಾಳಗಳ ನಡುವೆ ಸ್ಟಂಟ್ ಹಾಕಿದ್ದೇವೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ, ಚಿಂತೆ ಇಲ್ಲ” ಎಂದು ವೈದ್ಯರು ಭರವಸೆ ಕೊಟ್ಟರು. ಅದಾದ ಮರುದಿನವೇ ಸ್ವಾಮೀಜಿ ದೇಹ ಬಿಟ್ಟರು. ಆಗ ವೈದ್ಯರಿಂದ ಬಂದ ಉತ್ತರ, “ಹೃದಯದ ನಾಳ ಸವೆದು ಒಡೆದಿದ್ದರಿಂದ ಸ್ವಾಮೀಜಿ ತೀರಿಕೊಂಡರು” ಎಂದು!
ಜೀವವನ್ನು ಉಳಿಸಿಕೊಳ್ಳಬೇಕಾದರೆ ಹಣದ ಚಿಂತೆ ಮಾಡಬಾರದು, ಸರಿ. ಆದರೆ ಹಣಾವೇ ಇಲ್ಲದವರ ಜೀವಕ್ಕೆ ಬೆಲೆಯೇ ಇಲ್ಲವೇ? ಅತ್ಯಾಧುನಿಕ ತಂತ್ರಜ್ಞಾನ, ಯಂತ್ರ ತಂತ್ರಗಳೆಲ್ಲ ಬಂದ ನಂತರವೂ ಜನ ಸಾಮಾನ್ಯರಿಗೆ ಕಡಿಮೆ ವೆಚ್ಚದ ಚಿಕಿತ್ಸೆ ನೀಡಬಲ್ಲ ಆರೋಗ್ಯ ಧಾಮಗಳ ನಿರ್ಮಾಣವಾಗಲಿಲ್ಲವೆಂದರೆ ಈ ಪ್ರಗತಿಯಿಂದ ಏನು ಉಪಯೋಗ?
ಈ ಪ್ರಶ್ನೆಗಳು ನನ್ನನ್ನು ಬಹುವಾಗಿ ಕಾಡುತ್ತವೆ. ಸರ್ಕಾರಿ ಖೋಟಾದಲ್ಲಿ ಎಂಬಿಬಿಎಸ್ ಮಾಡಿದವರೂ ಕೂಡ ಇಂದು ಹಳ್ಳಿ ಪ್ರದೇಶಗಳ ಆಸ್ಪತ್ರೆಗಳಲ್ಲಿ ದುಡಿಯುವ ಮನಸ್ಸು ಮಾಡುತ್ತಿಲ್ಲ. ಇನ್ನು ಈ ಸರ್ಕಾರಿ ಆಸ್ಪತ್ರೆಗಳೋ, ಹೆಗ್ಗಣಗಳಿಂದ ತುಂಬಿಹೋಗಿಬಿಟ್ಟಿವೆ! ಖಾಸಗಿ ನರ್ಸಿಂಗ್ ಹೋಮ್ ಗಳಂತೂ ರಾಜಾರೋಷವಾಗಿ ಹಗಲು ದರೋಡೆಗಿಳಿದುಬಿಟ್ಟಿವೆ. ಏಕೆ ಹೀಗಾಗಿದೆ?
* * *
ಭಾರತವನ್ನ ಜಗತ್ತಿನ ಆರೋಗ್ಯ ಕೇಂದ್ರ ಅಂತಾರೆ. ಇತರ ದೇಶಗಳಿಗೆ ಹೋಲಿಸಿ ನೋಡಿದರೆ, ಇಲ್ಲಿ ಮಾತ್ರೆಗಳ, ಚಿಕಿತ್ಸೆಗಳ ವೆಚ್ಚ ಬಹಳ ಕಮ್ಮಿ ಅಂತ ಜಗತ್ತು ಭಾವಿಸಿದೆ. ಹೀಗಾಗಿಯೇ ಯುರೋಪು, ಅಮೆರಿಕಾ ಮೊದಲಾದ ಕಡೆಗಳಿಂದ ಜನ ನಮ್ಮಲ್ಲಿನ ದೊಡ್ಡದೊಡ್ಡ ಆಸ್ಪತ್ರೆಗಳಿಗೆ ಧಾವಿಸಿ, ಆರೋಗ್ಯ ’ಕೊಂಡುಕೊಳ್ಳುತ್ತಾರೆ’. ಆದರೆ ನಮ್ಮ ಕಥೆ ಬೇರೆಯೇ ಇದೆ. ನಮ್ಮ ದೇಶದ ಅತಿ ದೊಡ್ಡ ಔಷಧ ತಯಾರಿಕಾ ಕಂಪೆನಿ ’ಸಿಪ್ಲಾ’ದ ಮುಖ್ಯಸ್ಥರು, ಭಾರತ ಸದಾ ಕಾಲ ಹೆಲ್ತ್ ಎಮರ್ಜೆನ್ಸಿಯಲ್ಲಿಯೇ ಇರುತ್ತೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಗರ್ಭಿಣಿ ಹೆಂಗಸರು ಕಬ್ಬಿಣಾಂಶದ ಕೊರತೆಯಿಂದ ಸಾವಪ್ಪುವ ಸ್ಥಿತಿ ನಮ್ಮ ದೇಶದಲ್ಲಿ ಇಂದಿಗೂ ಮುಂದುವರಿದಿದೆ. ಈ ಕೊರತೆಯನ್ನು ನೀಗಿಸಬಲ್ಲ ಔಷಧಕ್ಕೆ ಬೆಲೆ ಎಷ್ಟು ಗೊತ್ತೇ? ಕೇವಲ ಒಂದು ಪೈಸೆ! ಅದನ್ನು ಕೂಡ ತಲುಪಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದರೆ ನಾವೆಂಥ ದೌರ್ಭಾಗ್ಯದ ಮಟ್ಟ ತಲುಪಿದ್ದೇವೆ ನೋಡಿ!
ಇನ್ನು, ನಮ್ಮನ್ನಾಳುವ ದೊರೆಗಳು ಅದು ಹೇಗೆ ಔಷಧಗಳ ಬೆಲೆಯೇರಿಕೆಗೆ ಅಂಕಿತ ಹಾಕಿದರು ಅನ್ನೋದನ್ನ ನೋಡೋಣ ಬನ್ನಿ…
ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಅದನ್ನು ಆದಷ್ಟು ಬೇಗ ಜಾರಿಗೊಳಿಸುವ ಭರದಲ್ಲಿ ಹಿಂದೆ ಇದ್ದ ಪ್ರಾಸೆಸ್ ಪೇಟೆಂಟ್ ಗೆ ತಿಲಾಂಜಲಿ ಇಟ್ಟು ಪ್ರಾಡಕ್ಟ್ ಪೆಟೆಂಟ್ ಗೆ ಅನುಮತಿ ಕೊಟ್ಟರು.
ಪ್ರಾಸೆಸ್ ಪೇಟೆಂಟ್ ಅಂದರೆ, ಔಷಧ ತಯಾರಿಕೆಯ ವಿಧಾನಕ್ಕೆ ಪಡೆಯುವ ಹಕ್ಕುಸ್ವಾಮ್ಯ. ಅದು ಜಾರಿಯಲ್ಲಿರುವಷ್ಟು ಕಾಲ ಒಂದೇ ಔಷಧವನ್ನು ಬೇರೆ ಬೇರೆ ಕಂಪೆನಿಗಳು ತಯಾರಿಸಿ, ಮಾರುಕಟ್ಟೆಯ ಜಿದ್ದಾಜಿದ್ದಿಗೆ ಬಿದ್ದು ಬೆಲೆ ಕಡಿಮೆ ಮಾಡಿ ಮಾರಾಟ ಮಾಡುತ್ತಿದ್ದವು. ಲಾಭ- ಜನ ಸಾಮಾನ್ಯರದಾಗುತ್ತಿತ್ತು. ಅತಿ ಕಡಿಮೆ ಬೆಲೆಯಲ್ಲಿ ಜೀವ ರಕ್ಷಕ ಔಷಧಗಳು ಅವರಿಗೆ ದೊರೆಯುತ್ತಿದ್ದವು.
ಆದರೆ, ಈ ಪ್ರಾಡಾಕ್ಟ್ ಪೇಟೆಂಟ್ ಕಥೆಯೇ ಬೇರೆ. ಔಷಧಿಗೇ ಪಡೆಯುವ ಹಕ್ಕು ಸ್ವಾಮ್ಯ ಅದು. ಔಷಧ ತಯಾರಿಕೆಯ ಮಾರ್ಗ ಯಾವುದೇ ಇರಲಿ, ಒಂದು ಔಷಧಿಯನ್ನು ಒಂದು ಕಂಪೆನಿ ಮಾತ್ರ ತಯಾರಿಸಬಹುದು ಎಂಬುದು ಅದರ ನಿಯಮ. ಹೀಗಾಗಿ, ಜೀವ ರಕ್ಷಕ ಔಷಧಗಳನ್ನೌ ತಯಾರಿಸುವ ಕಂಪೆನಿಗಳು ಮನಸೋ ಇಚ್ಚೆಗೆ ತಮ್ಮ ಔಷಧಿಗಳನ್ನು ಮಾರಬಹುದು. ಈಗಾಗಲೇ ಅದರ ಬಿಸಿ ನಾವು ಅನುಭವಿಸಲಾರಂಭಿಸಿದ್ದೇವೆ. ಇತ್ತೀಚಿನ ಮಾಮೂಲು ಖಾಯಿಲೆಗಳಾದ ಬಿಪಿ, ಶುಗರ್ ರೋಗಿಗಳಂತೂ ಈ ಬೆಲೆಯೇರಿಕೆ ಯಿಂದ ತತ್ತರಿಸಿಹೋಗಿದ್ದಾರೆ. ಔಷಧಕ್ಕೆ ಹಣ ಹೊಂದಿಸಲಾಗದೆ, ಸಾವು ಬಂದರೆ ಸಾಕು ಎಂದು ಕಾಯುತ್ತ ಕುಳಿತುಕೊಳ್ಳುವ ಸ್ಥಿತಿ ಅದಾಗಲೇ ಬಂದು ಮುಟ್ಟಿದೆ. ಅದಕ್ಕೇ ಆಗ ಹೇಳಿದ್ದು, ವೈದ್ಯಕೀಯ ಜಗತ್ತು ದುಬಾರಿಯಾಗುತ್ತಿದೆ ಎಂದು.
ಇದಕ್ಕೊಂದು ಪರಿಹಾರ ಬೇಡವೇ? ಬ್ರಿಟಿಷರು ತಂದು ಬಿಟ್ತ ಪ್ಲೇಗ್, ಮಲೇರಿಯಾಗಳಿಗೇ ಬಗ್ಗದ ಭಾರತೀಯರು ಆಧುನಿಕ ಜಗತ್ತು ತಂದೊಡ್ಡಿರುವ ಅಪಾಯಕ್ಕೆ ತಲೆಬಾಗಬಾರದು. ನಮ್ಮ ಬದುಕಿಗೆ ಸೂಕ್ತವಾದ, ಸರಳಾವಾದ, ವೆಚ್ಚದಾಯಕವಲ್ಲದ ಆರೋಗ್ಯ ಪದ್ಧತಿಯೊಂದನ್ನು ರೂಢಿಸಿಕೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ಅಲೋಪತಿಯೂ ಸೇರಿದಂತೆ ಪ್ರಯೋಗ ಆರಂಭವಾಗಬೇಕು. ಇದಕ್ಕೆ ನಮ್ಮ ತರುಣರು ಮುಂದೆ ಬರಲಾರರೇ?

Comments Posted (0)