ಅನುಭಾವ ಬಿಂದುಗಳು…

Posted by ಅರುಂಧತಿ | Posted in | Posted on 1:14 AM

1 -

ಕಾಣದ ನಿನ್ನ
ಅರಸಿ ಅರಸಿಯೇ ಬೇಸತ್ತೆ.
ಊಹೂಂ…!
ಇಲ್ಲಿಯೂ ದಕ್ಕಲಿಲ್ಲ
ಅಲ್ಲೂ ದಕ್ಕಲಿಲ್ಲ.
ಮಾಡಿಟ್ಟ ಅಡುಗೆಯ ಬಿಟ್ಟು
ಭಿಕ್ಷಾಟನೆಗೆ
ಹೋಗಿದ್ದೇ ತಪ್ಪಾಯಿತೇನೋ?

- 2 -

ಮಾತಿಗೆ ನಿಲುಕದವನು
ಎನ್ನುತ್ತಲೇ
ಮಾತಾಡುತ್ತಾರೆ
ನಿನ್ನ ಬಗ್ಗೆ
ರೇಜಿಗೆ ಹುಟ್ಟುವುಷ್ಟು
ನಿನ್ನ ಕಂಡ ಮೇಲೆ
ಮಾತಾಡಲು
ಅವರಿಗೆ ಅದೆಲ್ಲಿ
ಪುರುಸೊತ್ತು!?

- 3 -

ಹೂವು ಚೆಂದ, ಸುಂದರ
ಅನ್ನುತ್ತಲೇ ಉಳಿದೆವು,
ದುಂಬಿ ಹೀರಿತು ಮಕರಂದ.
ನಿನ್ನ ಬಗ್ಗೆ
ಹೇಳಿದ್ದೇ ಬಂತು,
ಅವ ಸವಿದ ನಿನ್ನಂದ!

- 4 -

ಬದುಕಿಗಿಂತ ಸಾವೇ ಮೇಲು
ಅನ್ನುತ್ತಾರೆ ಕೆಲವರು.
ಬದುಕಿನ ಸವಿ ಹೀರಲಾಗದೆ,
ಸಾವಿನ ಸಾಹಸ ಮಾಡಲಾಗದೆ
ನಿತ್ಯ ಸಾಯುತ್ತಾರೆ,
ಬದುಕಿದ್ದೂ ಸತ್ತಂತಿರುತ್ತಾರೆ.

- 5 -

ಹುಟ್ಟಿದೊಡನೆ ಅಮ್ಮನ್ನ ಕಳಕೊಂಡೆ
ಅವಳು ಹಾಲೂಡಿಸಿದ್ದರೆ,
ಈ ಅಲ್ಕೋಹಾಲು ನಾನೇಕೆ ಕುಡಿಯುತ್ತಿದ್ದೆ?
ಹಾಗಂತ ಹಲುಬುತ್ತಲೇ ಇದ್ದೆ.
ನೆನ್ನೆಯಷ್ಟೇ ಸಮಾಧಾನವಾಯಿತು
ಬಾರಿನ ನನ್ನ ಟೇಬಲ್ಲ ಪಕ್ಕದಲ್ಲಿ
ಪಾರ್ಟಿ ನಡೆದಿತ್ತು
ಅಧಿಕಾರಿಗಳು, ರಾಜಕಾರಣಿಗಳು
ಜಾಮಿನ ಮೇಲೆ ಜಾಮಿಳಿಸುತ್ತಿದ್ದರು,
‘ಹಾಲೂಡಿಸಿದ ತಾಯಿ’ಗೆ ವಿಷ ಕೊಟ್ಟು!

Comments Posted (0)